ಬೆಂಗಳೂರು,ಫೆ.5- ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷಾ ಹಾಗೂ ಸದಸ್ಯರು ಇಂದು ಆಸ್ಟಿನ್‍ಟೌನ್‍ನಲ್ಲಿರುವ ಬಿಬಿಎಂಪಿ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಸಮಿತಿಗೆ ಶಾಲಾ ಮಕ್ಕಳು ಸಮಸ್ಯೆಗಳ ಸರಮಾಲೆಯನ್ನೇ ತೆರದಿಟ್ಟರು.ಆಗಲೋ ಈಗಲೋ ಎನ್ನುವ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳು ಕೈನಲ್ಲಿ ಜೀವ ಹಿಡಿದು ಪಾಠ ಕೇಳಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ.
ಇನ್ನು ಶಾಲೆಯಲ್ಲಿ ಯಾವುದೇ ಮೂಲ ಸೌಕರ್ಯಗಳೂ ಇಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.ಶಾಲೆಯ ಸುತ್ತಮುತ್ತ ಕೆಲ ಪುಂಡ ಪೋಕರಿಗಳು ಗಾಂಜಾ ಸೇದುತ್ತಿದ್ದು ಶಾಲೆಗೆ ಬರಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಮಕ್ಕಳು ಸಮಿತಿಯ ಮುಂದೆ ಅಲವತ್ತುಕೊಂಡರು.
ಅಷ್ಟೇ ಅಲ್ಲದೇ, ಶಾಲೆಯ ಸುತ್ತ ಮುತ್ತಾ ಪುಂಡ ಪೋಕರಿಗಳು ಅಡ್ಡೆ ಹಾಕಿ ಕಿರುಕುಳ ನೀಡುತ್ತಿರುವುದಾಗಿಯೂ ಶಾಲಾ ವಿದ್ಯಾರ್ಥಿಗಳು ಸಮಸ್ಯೆ ತೋಡಿಕೊಂಡರು. ಮಕ್ಕಳ ಸಮಸ್ಯೆಗಳನ್ನು ಆಲಿಸಿದ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷಾ ಹಾಗೂ ಸದಸ್ಯರು ಸಮಸ್ಯೆಯನ್ನು ಶೀಘ್ರ ಪರಿಹರಿಸುವ ಭರವಸೆಯನ್ನು ನೀಡಿದರು.