ಬೆಂಗಳೂರು: ಕೊನೆಯ ಆಟ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆಪರೇಷನ್ ಲೋಟಸ್ ರಾಕೆಟ್ ಮಾಡುತ್ತಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ಆಪರೇಷನ್ ಕಮಲಕ್ಕೆ ಮೊದಲ ಹೊಡೆತ ಬಿದ್ದಿದೆ.
ಸುಮಾರು ಎರಡು ತಿಂಗಳಿನಿಂದ ಕಷ್ಟಪಟ್ಟು ಬಿಜೆಪಿಯಲ್ಲಿ ಹಿಡಿದಿಟ್ಟುಕೊಂಡಿದ್ದ ಚಿಂಚೋಳಿಯ ಶಾಸಕ ಉಮೇಶ್ ಜಾಧವ್ ಯೂ ಟರ್ನ್ ಹೊಡೆದಿದ್ದಾರೆ. ಆಪರೇಷನ್ ಕಮಲದ ಮೊದಲ ಹಂತದಲ್ಲಿಯೇ ನಾಲ್ವರು ಅತೃಪ್ತ ಶಾಸಕರು ಬಿಜೆಪಿ ಪಾಳಯ ಸೇರಿದ್ದರು. ಈಗ ಅವರಲ್ಲಿ ಶಾಸಕ ಜಾಧವ್ ತಮ್ಮ ಮಾತೃಪಕ್ಷಕ್ಕೆ ಬರಲು ನಿರ್ಧಾರ ಮಾಡಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಗಾಡ್ ಫಾದರ್ ಈಶ್ವರ್ ಖಂಡ್ರೆ ಜೊತೆ ಚರ್ಚೆ ನಡೆಸಿ ಕಾಂಗ್ರೆಸ್ ನಲ್ಲೇ ಉಳಿಯಲು ತೀರ್ಮಾನ ಮಾಡಿದ್ದು, ಉಮೇಶ್ ಜಾಧವ್ ಮನವೊಲಿಸುವಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಯಶಸ್ವಿಯಾಗಿದ್ದಾರೆ. ಆದರೆ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಎರಡು ಷರತ್ತುಗಳನ್ನು ಕಾಂಗ್ರೆಸ್ ಮುಂದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದ ಟಿಕೆಟ್ ಮತ್ತೆ ನನಗೆ ಕೊಡಬೇಕು ಹಾಗೂ ನನ್ನ ಕ್ಷೇತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಸ್ತಕ್ಷೇಪ ಮಾಡುವುದನ್ನು ತಡೆಯಬೇಕು ಎಂಬ ಎರಡು ಷರತ್ತುನ್ನು ವಿಧಿಸಿದ್ದಾರೆ. ಉಮೇಶ್ ಜಾಧವ್ ಷರತ್ತುಗಳನ್ನು ಒಪ್ಪಿ ಕೂಡಲೇ ಕೆಪಿಸಿಸಿ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಹೀಗಾಗಿ ಬಿಜೆಪಿಗೆ ಜಿಗಿಯೋ ತಮ್ಮ ನಿರ್ಧಾರದಿಂದ ಶಾಸಕ ಜಾಧವ್ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.