ಸರ್ಕಾರದ ರಕ್ಷಣೆಗೋಸ್ಕರ ಸಂಖ್ಯಾಬಲದ ಲೆಕ್ಕಾಚಾರದಲ್ಲಿ ತೊಡಗಿರುವ ಪ್ರಮುಖ ನಾಯಕರು

ಬೆಂಗಳೂರು, ಫೆ.5-ಬಜೆಟ್ ಅಧಿವೇಶನ ಸಮೀಪಿಸುತ್ತಿರುವಂತೆ ರಾಜ್ಯ ರಾಜಕಾರಣ ಕುತೂಹಲದ ಕುಲುಮೆಯಾಗುತ್ತಿದ್ದು, ಸಮ್ಮಿಶ್ರ ಸರ್ಕಾರದ ರಕ್ಷಣೆಗೆ ಮುಂದಾಗಿರುವ ಪ್ರಮುಖ ನಾಯಕರುಗಳು ಸಂಖ್ಯಾಬಲದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಒಂದೆಡೆ ಬಿಜೆಪಿ ಯಜ್ಞಯಾಗಾದಿಗಳು, ಆಪರೇಷನ್ ಕಮಲ, ಉಪಹಾರ ಕೂಟಗಳ ಮೂಲಕ ಬಿರುಸಿನ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದರೆ, ಮತ್ತೊಂದೆಡೆ ಕಾಂಗ್ರೆಸ್ ತಮ್ಮ ಶಾಸಕರ ನಿಷ್ಠೆಯ ಪರೀಕ್ಷೆಗಾಗಿ ಔತಣ ಕೂಟಗಳ ಮೊರೆ ಹೋಗಿದೆ.ಏಟು ಎದುರೇಟಿನ ರಾಜಕಾರಣದಲ್ಲಿ ಸದ್ಯದ ಸಂಖ್ಯಾಬಲದ ಲೆಕ್ಕಾಚಾರ ನೋಡುವುದಾದರೆ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಸುರಕ್ಷಿತ ವಲಯದಲ್ಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

120 ಸಂಖ್ಯಾಬಲ ಹೊಂದಿದ್ದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಬೆಂಬಲ ನೀಡಿದ ಪಕ್ಷೇತರ ಶಾಸಕರಾದ ರಾಣೇಬೆನ್ನೂರು ಕ್ಷೇತ್ರದ ಆರ್.ಶಂಕರ್, ಮುಳಬಾಗಿಲು ಕ್ಷೇತ್ರದ ನಾಗೇಶ್ ಅವರು ಬಿಜೆಪಿ ಪಾಳಯದತ್ತ ಮುಖ ಮಾಡಿದ್ದಾರೆ.ಹೀಗಾಗಿ ಮೈತ್ತಿ ಕೂಟದ ಸಂಖ್ಯಾಬಲ 118ಕ್ಕಿಳಿದಿದೆ.

ಅದರಲ್ಲೂ ನಾಲ್ಕು ಮಂದಿ ಕಾಂಗ್ರೆಸ್ ಶಾಸಕರು ಕಳೆದ ಬಾರಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರು ಹಾಜರಾಗುವ ಮೂಲಕ ಸೆಡ್ಡು ಹೊಡೆದು ನಿಂತಿದ್ದಾರೆ. ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್ ಅವರ ಗೈರು ಹಾಜರಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೋಟಿಸ್ ಕೂಡ ನೀಡಿದ್ದರು. ನೋಟಿಸ್‍ಗೆ ಅವರು ಉತ್ತರವನ್ನೂ ನೀಡಿದ್ದಾರೆ.ಖುದ್ದು ಹಾಜರಾಗುವಂತೆ ನೀಡಿದ್ದ ನೋಟಿಸ್‍ಗೆ ನಾಲ್ಕು ಮಂದಿ ಈವರೆಗೂ ಕ್ಯಾರೆ ಅಂದಿಲ್ಲ.

ಇದು ಕಾಂಗ್ರೆಸ್ ಪಾಳಯದಲ್ಲಿ ಗಲಿಬಿಲಿಯ ವಾತಾವರಣ ನಿರ್ಮಿಸಿದೆ.ಇದರ ಜತೆಗೆ ರೆಸಾರ್ಟ್ ಬಡಿದಾಟದ ಪ್ರಕರಣದಲ್ಲಿ ಗಾಯಗೊಂಡಿರುವ ಆನಂದ್‍ಸಿಂಗ್ ಅನಾರೋಗ್ಯದ ನೆಪವೊಡ್ಡಿ ಸದನದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಲಾಗುತ್ತಿದೆ.

ಆನಂದ್‍ಸಿಂಗ್ ಮೇಲೆ ಹಲ್ಲೆ ಮಾಡಿದ ಕಾರಣಕ್ಕಾಗಿ ಕ್ರಿಮಿನಲ್ ಪ್ರಕರಣದ ಆರೋಪಿಯಾಗಿರುವ ಜೆ.ಎನ್.ಗಣೇಶ್ ಬಂಧನ ಭೀತಿಯಿಂದ ಅಧಿವೇಶನದಿಂದ ದೂರ ಉಳಿಯಬಹುದು ಎಂಬ ಮಾತುಗಳಿವೆ.

ಒಂದು ವೇಳೆ ಈ ಆರು ಮಂದಿ ಗೈರು ಹಾಜರಾದರೆ ಸದನದಲ್ಲಿ ಮೈತ್ರಿ ಕೂಟದ ಸಂಖ್ಯಾಬಲ 112ಕ್ಕೆ ಕುಸಿಯಲಿದೆ.ಇಬ್ಬರು ಪಕ್ಷೇತರರನ್ನೂ ಒಳಗೊಂಡಂತೆ ಬಿಜೆಪಿಯ ಸಂಖ್ಯಾಬಲ 106ರಷ್ಟಿದೆ.

ಈ ಮಧ್ಯೆ ಹತ್ತಾರು ಕೋಟಿ ಆಮಿಷಗಳನ್ನು ಒಡ್ಡಿ ಬಿಜೆಪಿಯವರು ಕಾಂಗ್ರೆಸ್ -ಜೆಡಿಎಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದು, ಅದರಲ್ಲಿ ಯಶಸ್ವಿಯಾಗಿ 7 ಮಂದಿಯ ಮನವೊಲಿಸಿದರೆ ಸಮ್ಮಿಶ್ರ ಸರ್ಕಾರಕ್ಕೆ ಆಪತ್ತು ತಪ್ಪಿದ್ದಲ್ಲ.

ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‍ನ ಬಹಳಷ್ಟು ಶಾಸಕರ ನಡೆ ನಿಗೂಢವಾಗಿದೆ.ಜೆಡಿಎಸ್‍ನ ಕೆಲವೊಂದು ಶಾಸಕರೂ ಕೂಡ ಮೇಲ್ನೋಟಕ್ಕೆ ಸಮ್ಮಿಶ್ರ ಸರ್ಕಾರದ ಬೆಂಬಲಕ್ಕಿದ್ದೇವೆ ಎಂದು ಹೇಳುತ್ತಿದ್ದರೂ ಒಳಗೊಳಗಿನ ಮಾತುಕತೆಗಳು ನಡೆಯುತ್ತಲೇ ಇವೆ.

ಹೀಗಾಗಿ ಯಾವ ಸಂದರ್ಭದಲ್ಲೂ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿಲ್ಲದ ಜೆಡಿಎಸ್-ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಶಾಸಕರನ್ನು ಬಿಗಿ ಹಿಡಿತದಲ್ಲಿಟ್ಟು ಕೊಳ್ಳಲು ಕಸರತ್ತು ಆರಂಭಿಸಿದ್ದಾರೆ. ಅದರ ಭಾಗವಾಗಿ ಇಂದು ಸಿದ್ದರಾಮಯ್ಯ ಸಚಿವರನ್ನು ಔತಣಕೂಟಕ್ಕೆ ಆಹ್ವಾನಿಸಿದ್ದು, ಆಪರೇಷನ್ ಕಮಲಕ್ಕೆ ಶಾಸಕರು ಜಾರದಂತೆ ಎಚ್ಚರಿಕೆ ವಹಿಸುವ ಮತ್ತು ಈಗಾಗಲೇ ಅಸಮಾಧಾನಗೊಂಡು ಹೊರಗುಳಿದಿರುವ ಶಾಸಕರನ್ನು ಮನವೊಲಿಸುವ ಮತ್ತೊಂದು ಸುತ್ತಿನ ಪ್ರಯತ್ನ ಆರಂಭಗೊಂಡಿದೆ.

ರೆಸಾರ್ಟ್ ಬಡಿದಾಟ ಪ್ರಕರಣದಲ್ಲಿ ಪರಸ್ಪರ ಶತ್ರುಗಳಾಗಿರುವ ಆನಂದ್‍ಸಿಂಗ್ ಮತ್ತು ಕಂಪ್ಲಿ ಗಣೇಶ್ ನಡುವೆ ರಾಜಿ ಮಾಡಿಸುವ ಹೊಣೆಗಾರಿಕೆಯನ್ನು ಸಚಿವ ಡಿ.ಕೆ.ಶಿವಕುಮಾರ್‍ಗೆ ವಹಿಸಲಾಗಿದೆ.

ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆನಂದ್‍ಸಿಂಗ್ ನಿನ್ನೆ ರಾತ್ರಿ ಡಿಸ್‍ಚಾರ್ಜ್ ಆಗಿದ್ದು, ಮನೆಗೆ ತೆರಳಿದ್ದಾರೆ.ಹೀಗಾಗಿ ಗಣೇಶ್ ಅವರಿಗೆ ನಿರೀಕ್ಷಣಾ ಜಾಮೀನು ಕೊಡಿಸುವ ಪ್ರಯತ್ನಗಳು ನಡೆಯುತ್ತಿವೆ.ಇದು ಯಶಸ್ವಿಯಾದರೆ ಇಬ್ಬರೂ ಶಾಸಕರು ಸದನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಗಣೇಶ್ ಅವರು ನಾಲ್ವರು ಅತೃಪ್ತ ಶಾಸಕರ ಜತೆ ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಸಂಧಾನಕ್ಕೆ ಒಪ್ಪಿ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಸೂಚಿಸದೇ ಇದ್ದರೆ ಕಾನೂನು ಕ್ರಮ ಕಠಿಣಗೊಳಿಸುವ ಕುರಿತು ಚರ್ಚೆಗಳು ನಡೆದಿವೆ.

ತಮ್ಮ ಶಾಸಕರುಗಳ ನಿಷ್ಠೆಯ ಪರೀಕ್ಷೆಗಾಗಿ ಕಾಂಗ್ರೆಸ್ ಔತಣ ಕೂಟ ಆಯೋಜನೆ ಮಾಡಿದ್ದು, ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಎಲ್ಲಾ ಶಾಸಕರು ಹಾಗೂ ಸಚಿವರಿಗೆ ಖಾಸಗಿ ಹೋಟೆಲ್‍ನಲ್ಲಿ ನಾಳೆ ಔತಣ ಕೂಟಕ್ಕೆ ಆಹ್ವಾನಿಸಿದ್ದಾರೆ.

ಅದರಲ್ಲಿ ಎಷ್ಟು ಮಂದಿ ಭಾಗವಹಿಸುತ್ತಾರೆ, ಗೈರು ಹಾಜರಾಗುವವರ ಕಾರಣಗಳನ್ನು ನೋಡಿಕೊಂಡು ಮುಂದಿನ ಕಾರ್ಯತಂತ್ರವನ್ನು ಕಾಂಗ್ರೆಸ್ ರಚಿಸಲಿದೆ.
ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ನಂತರ ಅಧಿವೇಶನದಲ್ಲಿ ಎಲ್ಲಾ ಶಾಸಕರು ಕಡ್ಡಾಯವಾಗಿ ಭಾಗವಹಿಸಬೇಕೆಂದು ಕಾಂಗ್ರೆಸ್ ನಿರ್ದೇಶನ ನೀಡಿದೆ. ಬಜೆಟ್ ಅಧಿವೇಶನಕ್ಕೆ ಯಾರು ಗೈರು ಹಾಜರಾಗಬಾರದು ಎಂಬ ಕಟ್ಟಪ್ಪಣೆ ಮಾಡಲಾಗಿದೆ.ಒಂದು ವೇಳೆ ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಮೊಂಡುತನ ಪ್ರದರ್ಶಿಸುವ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ತಯಾರಿ ಕೂಡ ನಡೆದಿದೆ.

ಬಿಜೆಪಿಯ ಬಿರುಸಿನ ಚಟುವಟಿಕೆಗೆ ಏಟು ಎದುರೇಟಾಗಿ ಕಾಂಗ್ರೆಸ್ ಮತ್ತೊಮ್ಮೆ ಅಕಾಡಕ್ಕಿಳಿರುವುದು ರಾಜ್ಯ ಕಾರಣದಲ್ಲಿ ಕುತೂಹಲ ಮೂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ