ಬೆಂಗಳೂರು, ಫೆ.5- ಕ್ಷಣ ಕ್ಷಣಕ್ಕೂ ರಾಜ್ಯದ ರಾಜಕೀಯ ಬೆಳವಣಿಗೆಗಳು ಕುತೂಹಲ ಕೆರಳಿಸುತ್ತಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸುವ, ಉಳಿಸಿಕೊಳ್ಳುವ ಚದುರಂಗದಾಟ ಮುಂದುವರಿದಿದೆ.ಈ ರಾಜಕೀಯ ಮೇಲಾಟದಲ್ಲಿ ಗೆಲ್ಲುವವರಾರು ಎಂಬ ಹಂತಕ್ಕೆ ಬಂದು ತಲುಪಿದೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳ ಮುಖಂಡರು ತಮ್ಮ ಶಾಸಕರೊಂದಿಗೆ ಇಂದು ಮಹತ್ವದ ಸಭೆ ನಡೆಸಿದ್ದಾರೆ. ನಾಳೆಯಿಂದ ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಏನಾಗಲಿದೆ, ಯಾರು ಎತ್ತ ವಾಲುತ್ತಾರೆ ಎಂಬ ಅನುಮಾನ ಕಾಡತೊಡಗಿದೆ.
ಕಾಂಗ್ರೆಸ್ನ 12, ಜೆಡಿಎಸ್ನ ಕೆಲವು ಶಾಸಕರು ಬಜೆಟ್ಗೂ ಮುನ್ನವೇ ರಾಜೀನಾಮೆ ನೀಡುತ್ತಾರೆ ಎನ್ನಲಾಗಿದೆ. ಹಲವರು ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.
ತಮ್ಮ ತಮ್ಮ ಶಾಸಕರನ್ನೇ ಅನುಮಾನದಿಂದ ನೋಡಬೇಕಾದ ಪರಿಸ್ಥಿತಿಗೆ ರಾಜಕೀಯ ವ್ಯವಸ್ಥೆ ಬಂದು ನಿಂತಿದೆ. ಹಾಗಾಗಿ ಎಲ್ಲ ಪಕ್ಷಗಳ ನಾಯಕರು ಇಂದು ಔತಣ ಕೂಟ, ಉಪಹಾರ ಕೂಟದ ನೆಪದಲ್ಲಿ ಸಭೆ ನಡೆಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ, ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರು ತಮ್ಮ ನಿವಾಸ ಧವಳಗಿರಿಯಲ್ಲಿ ತಮ್ಮ ಶಾಸಕರಿಗೆ ಉಪಹಾರ ಕೂಟ ಏರ್ಪಡಿಸಿದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ತಾಜ್ ವೆಸ್ಟೆಂಡ್ನಲ್ಲಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಅತ್ತ ಆಪರೇಷನ್ ಕಮಲದ ಭೀತಿಯಲ್ಲಿ ಕಾಂಗ್ರೆಸ್ ಪಕ್ಷ ತಮ್ಮ ಸಚಿವರು, ಶಾಸಕರಿಗೆ ಇಂದು ಸಂಜೆ ಔತಣ ಕೂಟ ಏರ್ಪಡಿಸಿದೆ.ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಯಲ್ಲಿ ಈ ಔತಣ ಕೂಟ ಆಯೋಜಿಸಲಾಗಿದೆ.ನಾಳೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಔತಣ ಕೂಟ ಹಮ್ಮಿಕೊಂಡಿದ್ದಾರೆ.
ಮೂರೂ ಪಕ್ಷಗಳು ತಮ್ಮ ತಮ್ಮ ಶಾಸಕರ ಬಲಾಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ.ಅಧಿವೇಶನದಲ್ಲಿ ಯಾವ ಪಕ್ಷದ ಶಾಸಕರು ಕೈಕೊಡಲಿದ್ದಾರೆ ಎಂಬುದು ಅನುಮಾನವಾಗಿದೆ.ಈ ಹಿನ್ನೆಲೆಯಲ್ಲಿ ತಮ್ಮ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಎಲ್ಲ ನಾಯಕರೂ ಮುಂದಾಗಿದ್ದು, ರಾಜ್ಯದ ರಾಜಕೀಯ ನಡೆ ತೀವ್ರ ಕುತೂಹಲ ಕೆರಳಿಸಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸುವುದೇ ಅನುಮಾನ ಎಂದು ಪ್ರತಿಪಕ್ಷ ಬಿಜೆಪಿ ನಾಯಕರು ಹೇಳುತ್ತಿದ್ದಾರೆ.ಅತೃಪ್ತ ಕಾಂಗ್ರೆಸ್ ಶಾಸಕರು ಅಧಿವೇಶನಕ್ಕೂ ಮುನ್ನ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ದಿನೇ ದಿನೇ ಅತೃಪ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಬಜೆಟ್ಗೂ ಮುನ್ನವೇ ಸರ್ಕಾರವನ್ನು ಬೀಳಿಸುವ ತಂತ್ರವನ್ನು ಬಿಜೆಪಿ ಹೆಣೆಯುತ್ತಿದೆ ಎನ್ನಲಾಗುತ್ತಿದೆ.
ಇದಕ್ಕೆ ಪ್ರತಿತಂತ್ರ ರೂಪಿಸಲು ಕೈ ನಾಯಕರು ಮುಂದಾಗಿದ್ದಾರೆ.ಬಿಜೆಪಿಯ ಬಿಎಸ್ವೈ ಆಪ್ತರಿಂದಲೇ ನಮ್ಮ ಸರ್ಕಾರ ಉಳಿಯಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.ಬಿಜೆಪಿಯ ಹಲವು ಶಾಸಕರಿಂದ ರಾಜೀನಾಮೆ ಕೊಡಿಸಲು ಕಾಂಗ್ರೆಸ್-ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ತಡೆಯಲು ಮತ್ತು 104 ಬಿಜೆಪಿ ಶಾಸಕರ ಒಗ್ಗಟ್ಟನ್ನು ಕಾಪಾಡಿಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.ನಾಳೆ ಜಂಟಿ ಅಧಿವೇಶನ, ಫೆ.8ರಂದು ಮೈತ್ರಿ ಸರ್ಕಾರದ ಬಜೆಟ್ ಮಂಡನೆ, ಬಜೆಟ್ ಬಗ್ಗೆ ಚರ್ಚೆಯಾಗಬೇಕಿತ್ತು.ಆದರೆ, ರಾಜಕೀಯದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಯಾವ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ, ಯಾರು ರಾಜೀನಾಮೆ ನೀಡುತ್ತಾರೆ, ಯಾರ ಮನವೊಲಿಸಬೇಕು, ಯಾರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ವಿಷಯದಲ್ಲಿಯೇ ರಾಜಕೀಯ ಪಕ್ಷಗಳು ತಲ್ಲೀನವಾಗಿವೆ. ಅತ್ತ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್ ರೂಪಿಸುವಲ್ಲಿ ತೊಡಗಿದ್ದಾರೆ.
ಎಲ್ಲರ ಚಿತ್ತ ಅಧಿವೇಶನದತ್ತ ನೆಟ್ಟಿದ್ದು, ಏನಾಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.