
ಬೆಂಗಳೂರು, ಫೆ.5- ನಮ್ಮ ಪಕ್ಷದಿಂದ ರಾಜ್ಯಪಾಲರ ಭಾಷಣಕ್ಕಾಗಲಿ ಇಲ್ಲವೆ ಬಜೆಟ್ ಮಂಡನೆಗೆ ಯಾವುದೇ ರೀತಿಯ ಅಡ್ಡಿ ಪಡಿಸುವ ಪ್ರಯತ್ನವನ್ನು ನಾವು ಮಾಡುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ವೇಳೆ ಬಿಜೆಪಿ ಅಡ್ಡಿಪಡಿಸುತ್ತದೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ. ಬಜೆಟ್ ಮಂಡನೆಗೂ ನಮ್ಮದೇನೂ ತಕರಾರಿಲ್ಲ. ಪ್ರತಿಪಕ್ಷವಾಗಿ ನಾವು ನಮ್ಮ ಕೆಲಸವನ್ನಷ್ಟೇ ಮಾಡುತ್ತಿದ್ದೇವೆ ಎಂದು ಹೇಳಿದರು.
ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಪ್ರತಿಪಕ್ಷವಾಗಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದೆ. ವಿಧಾನಸೌಧದ ಒಳಗೂ ಮತ್ತು ಹೊರಗೂ ನಾವು ಸರ್ಕಾರದ ತಪ್ಪುಗಳನ್ನು ಹುಡುಕಿ ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ. ಅತೃಪ್ತ ಶಾಸಕರಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಪುನರುಚ್ಚರಿಸಿದರು.
ಬಜೆಟ್ ಮಂಡನೆಗೆ ನಾವು ಅಡ್ಡಿಪಡಿಸುತ್ತೇವೆ ಎನ್ನುವುದಾಗಲಿ, ಇಲ್ಲವೆ ಇದರ ವಿರುದ್ಧ ಮಾತನಾಡದಂತೆ ಎಲ್ಲ ಶಾಸಕರಿಗೂ ಸೂಚನೆ ಕೊಡಲಾಗಿದೆ.ಈ ಬಗ್ಗೆ ಶಾಸಕಾಂಗ ಸಭೆಯಲ್ಲೂ ಸಲಹೆ ಮಾಡುವುದಾಗಿ ಹೇಳಿದರು.
ಜೆಡಿಎಸ್ ವಿರುದ್ಧ ವಾಗ್ದಾಳಿ: ಇನ್ನು ಆಪರೇಷನ್ ಕಮಲದ ರೂವಾರಿ ಯಡಿಯೂರಪ್ಪ ಎಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆರೋಪಕ್ಕೆ ತಿರುಗೇಟು ನೀಡಿದ ಬಿಎಸ್ವೈ ಮೊದಲು ತಮ್ಮ ಪಕ್ಷದ ಶಾಸಕರನ್ನು ಸರಿಯಾಗಿಟ್ಟುಕೊಂಡು ಮಾತನಾಡಲಿ ಎಂದು ತಿರುಗೇಟು ನೀಡಿದರು.
ದೇವೇಗೌಡರು ದೇಶದ ಪ್ರಧಾನಿಯಾದವರು.ಈ ರೀತಿ ಆಧಾರ ರಹಿತವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ.ಅವರ ಪಕ್ಷದ ಶಾಸಕರೇ ಅವರನ್ನು ನಂಬುತ್ತಿಲ್ಲ. ಇನ್ನು ಕಾಂಗ್ರೆಸ್ ಬಗ್ಗೆ ಮಾತನಾಡದಿರುವುದೇ ಲೇಸು.ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಆಪರೇಷನ್ ಕಮಲದ ಹೆಸರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇದಕ್ಕೆ ಏನು ಹೇಳುವುದು ಎಂದು ಪ್ರಶ್ನಿಸಿದರು.
ನಾವು ಯಾವ ಆಪರೇಷನ್ ಕಮಲವನ್ನೂ ನಡೆಸುತ್ತಿಲ್ಲ. ಸರ್ಕಾರದ ಬಗ್ಗೆ ನಂಬಿಕೆ ಇಲ್ಲದವರು ಅಸಮಾಧಾನಗೊಂಡು ಹೊರಹೋಗಿರಬಹುದು. ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎಂದು ಪುನರುಚ್ಚರಿಸಿದರು.