ಬೆಂಗಳೂರು, ಫೆ.4- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಪ್ತ ಶಾಸಕರಿಂದಲೇ ನಮ್ಮ ಸರ್ಕಾರ ಉಳಿಯಲಿದೆ. ಮೈತ್ರಿ ಸರ್ಕಾರ ತೊಂದರೆಗೆ ಸಿಲುಕುವ ಯಾವ ಸಾಧ್ಯತೆಯೂ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಸಂಪಾದಕರೊಂದಿಗಿನ ಸಭೆಯಲ್ಲಿ ಈ ಮಾಹಿತಿ ನೀಡಿದ ಅವರು, ಬಿಜೆಪಿಯಲ್ಲಿ ತಮ್ಮ ಬಗ್ಗೆ ಹಲವರಿಗೆ ಮೃದು ಧೋರಣೆ ಇದೆ. ನಿಮ್ಮ ಪಾಡಿಗೆ ನೀವು ಸರ್ಕಾರ ನಡೆಸಿಕೊಂಡು ಹೋಗಿ.ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಹೇಳಿದ್ದಾರೆ.ಹೀಗಾಗಿ ನಮ್ಮ ಸರ್ಕಾರ ಅವಧಿ ಪೂರೈಸುವುದರಲ್ಲಿ ಅನುಮಾನ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಯಾರಿಗೂ ಅತೃಪ್ತಿ ಇಲ್ಲ, ಎಲ್ಲರನ್ನೂ ಮ್ಯಾನೇಜ್ ಮಾಡಲಾಗುತ್ತಿದ್ದು, ಆಪರೇಷನ್ ಕಮಲದ ಭಯ ಇಲ್ಲ ಎಂದರು.
ಫೆ.8 ರಂದು 2019-20ನೇ ಸಾಲಿನ ಆಯವ್ಯಯ ಮಂಡಿಸಲಿದ್ದು, ಮುಂದಿನ ಅವಧಿಯಲ್ಲಿ ಮತ್ತಷ್ಟು ಉತ್ತಮ ಆಡಳಿತ ನಡೆಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮೇಲ್ನೋಟಕ್ಕೆ ಸರ್ಕಾರ ಅಲುಗಾಡುತ್ತಿದೆ ಎಂದು ಕಾಣುತ್ತಿದೆ.ಆದರೆ ಒಳನೋಟವೇ ಬೇರೆ ಇದೆ. ಇಂದು ಬೆಳಗ್ಗೆ ಮಾಜಿ ಸಚಿವ ರಮೇಶ್ ಜಾರಕಿ ಹೊಳಿ, ಶಾಸಕರಾದ ನಾಗೇಂದ್ರ, ಮಹೇಶ್ ಕುಮಟಳ್ಳಿ ಸೇರಿದಂತೆ ಹಲವು ಶಾಸಕರೊಂದಿಗೆ ಮಾತನಾಡಿದ್ದು, ಎಲ್ಲ ಶಾಸಕರು ತಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.
ಬಿಜೆಪಿಯವರು ಏನೇ ಪ್ರಯತ್ನ ನಡೆಸಿದರೂ ಶಾಸಕರನ್ನು ಸೆಳೆಯಲಾಗುವುದಿಲ್ಲ. ಮೈತ್ರಿ ಸರ್ಕಾರ ನಡೆಸುವ ಅನುಭವವಿದೆ. ತಾವು ಯಾವುದೇ ಪೋಲಿಟಿಕಲ್ ಮ್ಯಾನೇಜ್ಮೆಂಟ್ ಮಾಡುತ್ತಿಲ್ಲ. ಕೆಲವು ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಮ್ಮ ನಾಯಕರು, ಅವರು ಮುಖ್ಯಮಂತ್ರಿ ಯಾಗಬೇಕೆಂದು ಹೇಳುತ್ತಿರುವುದು ನಿಜ. ಆದರೆ ಸಿದ್ದರಾಮಯ್ಯನವರೇ ಹಲವು ಬಾರಿ ಮುಂದೊಂದು ದಿನ ತಾವು ಮತ್ತೊಮ್ಮೆ ಸಿಎಂ ಆಗಬೇಕೆಂದು ಹೇಳಿದ್ದಾರೆ. ಹೀಗಾಗಿ 113 ಶಾಸಕರ ಬೆಂಬಲವಿರುವ ಯಾವ ನಾಯಕ ಬೇಕಾದರೂ ಸಿಎಂ ಆಗಬಹುದು ಎಂದರು.
ತಮ್ಮ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ಬಗ್ಗೆ ಗಮನ ಸೆಳೆದಾಗ, ಇದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ವೈದ್ಯರ ಮಗ ವೈದ್ಯ. ವಕೀಲರ ಮಗ ವಕೀಲ ಆಗಬಹುದಾದರೆ ರಾಜಕಾರಣದಲ್ಲಿ ಮಗ ರಾಜಕಾರಣಿಯಾಗಬಾರದೇ? ಎಂದ ಅವರು, ಹಲವು ಪಕ್ಷಗಳಲ್ಲಿ ತಂದೆ-ಮಗ-ಮೊಮ್ಮಗ ಇದ್ದಾರೆ. ನಮ್ಮ ಪಕ್ಷದಲ್ಲಿ ಆದರೆ ಅದರಲ್ಲೇನು ವಿಶೇಷ ಎಂದರು.
ತಾವು ಭಾವುಕ ಜೀವಿಯಾಗಿದ್ದು, ಕೆಲವೊಮ್ಮೆ ಭಾವನಾತ್ಮಕವಾಗಿ ಮಾತನಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.