ಬೆಂಗಳೂರು, ಫೆ.4-ಕಾಂಗ್ರೆಸ್ನ ಅತೃಪ್ತರು ನಾಲ್ವರು ಶಾಸಕರು ತಣ್ಣಗಾದರೆ …? ಅಸಮಾಧಾನಗೊಂಡು ಪಕ್ಷದ ವಿರುದ್ಧ ಸಿಡಿದೆದ್ದಿದ್ದ ರಮೇಶ್ ಜಾರಕಿ ಹೊಳಿ, ಮಹೇಶ್ ಕುಮಟಳ್ಳಿ, ನಾಗೇಂದ್ರ, ಉಮೇಶ್ ಜಾಧವ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಮ್ಮತಿ ಸೂಚಿಸಿದ್ದಾರೆ.
ನಾವು ಪಕ್ಷ ಬಿಟ್ಟು ಹೋಗುವುದಿಲ್ಲ.ನಮ್ಮಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ನಾವು ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಮನ್ವಯ ಸಮಿತಿ ಅಧ್ಯಕ್ಷರೂ ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈ ಹಿಂದೆ ಕರೆದಿದ್ದ ವಿಶೇಷ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ಈ ನಾಲ್ವರು ಖುದ್ದು ಹಾಜರಾಗಿ ಸ್ಪಷ್ಟನೆ ನೀಡಬೇಕು, ಇಲ್ಲದಿದ್ದರೆ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆ ರವಾನಿಸಲಾಗಿತ್ತು. ಈ ನಡುವೆ ಅತೃಪ್ತರ ಮನವೊಲಿಕೆ ಯತ್ನವೂ ಕೂಡ ನಡೆದಿದ್ದು, ನಾಲ್ವರು ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.ಹೀಗಾಗಿ ಕಾಂಗ್ರೆಸ್ಗೆ ಕೊಂಚ ನಿರಾಳವಾಗಿದೆ ಎಂದು ತಿಳಿದುಬಂದಿದೆ.
ಆಪರೇಷನ್ ಕಮಲದ ಭೀತಿ ಸಮುದ್ರದೊಳಗಿನ ಜ್ವಾಲಾಮುಖಿಯಂತೆ ಇದೆ.ಅತೃಪ್ತ ನಾಲ್ವರು ಸಮಾಧಾನಗೊಂಡರೂ ಇನ್ನೂ ಯಾವ ಸಮಯದಲ್ಲಿ ಏನಾಗುತ್ತದೆ ಎಂಬುದು ಊಹಿಸಲು ಅಸಾಧ್ಯವಾಗಿದೆ.ಮುಂಬೈನಲ್ಲಿ ಆಪರೇಷನ್ ಕಮಲ ಚಟುವಟಿಕೆಗಳು ಮುಂದುವರೆದಿವೆ ಎಂದು ಹೇಳಲಾಗುತ್ತಿದೆ.
ಆಪರೇಷನ್ ಕಮಲ ನೇತೃತ್ವ ವಹಿಸಿದ್ದ ಬೆಂಗಳೂರಿನ ಪ್ರಭಾವಿ ಬಿಜೆಪಿ ಶಾಸಕರೊಬ್ಬರು ನಿನ್ನೆ ದಿಢೀರೆಂದು ಮತ್ತೆ ಮುಂಬೈಗೆ ತೆರಳಿದ್ದಾರೆ. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ಮಾಡಲು ಬಿಜೆಪಿ ತಂತ್ರ ಹೆಣೆದಿದೆ. ಈ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿ ಸರ್ಕಾರವನ್ನು ಕೆಡವಿ ಹೊಸ ಸರ್ಕಾರ ರಚಿಸಲು ಬಿಜೆಪಿ ಯೋಜನೆ ರೂಪಿಸಿದೆ.ಇದಕ್ಕೆ ಆಡಳಿತಾರೂಢ ಕಾಂಗ್ರೆಸ್- ಜೆಡಿಎಸ್ ಪಕ್ಷಗಳೂ ಪ್ರತಿತಂತ್ರ ರೂಪಿಸಿವೆ.
ಪ್ರತಿದಿನ ಈ ರಾಜಕೀಯ ಮೇಲಾಟಗಳು ನಡೆಯುತ್ತಲೇ ಇದೆ.ಕಾಂಗ್ರೆಸ್ನಿಂದ ಅತೃಪ್ತಗೊಂಡಿರುವ ಶಾಸಕರ ಮೇಲೆ ಬಿಜೆಪಿ ಕಣ್ಣಿಟ್ಟು ಅವರನ್ನು ಸೆಳೆಯುವ ಯತ್ನವನ್ನು ನಿರಂತರವಾಗಿ ಮುಂದುವರೆಸುತ್ತಲೇ ಬಂದಿದೆ.ಇದನ್ನರಿತ ಕಾಂಗ್ರೆಸ್ ತನ್ನ ಶಾಸಕರ ಒಗ್ಗಟ್ಟು ಕಾಯ್ದುಕೊಳ್ಳುವ ಪ್ರಯತ್ನ ತೀವ್ರಗೊಳಿಸಿದೆ.
ಈ ನಡುವೆ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿರುವ ಶಾಸಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ.ರಿವರ್ಸ್ ಆಪರೇಷನ್ ಆಗಬಹುದೆಂಬ ಆತಂಕ ಬಿಜೆಪಿಯವರನ್ನು ಕಾಡತೊಡಗಿದೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಒಬ್ಬೊಬ್ಬರೇ ಶಾಸಕರನ್ನು ಕರೆದು ಮಾತುಕತೆ ನಡೆಸಿದ್ದಾರೆ.
ಸರ್ಕಾರವನ್ನು ಉರುಳಿಸುವ, ಉಳಿಸಿಕೊಳ್ಳುವ ಆಟ ಮುಂದುವರೆದಿದೆ. ಅಧಿವೇಶನದಲ್ಲಿ ಬಿಜೆಪಿ ನಿರ್ಣಯ ಅವಿಶ್ವಾಸ ನಿರ್ಣಯ ಮಂಡಿಸಿ ತನ್ನ ದಾಳ ಉರುಳಿಸುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ವಿಶ್ವಾಸ ಮತ ಸಾಬೀತು ಪಡಿಸಲು ದೋಸ್ತಿ ಪಕ್ಷಗಳು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿವೆ.
ಇದೇ 6 ಅಥವಾ 7 ರಂದು ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಔತಣಕೂಟದ ನೆಪದಲ್ಲಿ ಎರಡೂ ಪಕ್ಷಗಳ ಶಾಸಕರ ಸಭೆ ಕರೆದಿದ್ದಾರೆ.ಈ ಸಭೆಯಲ್ಲಿ ಎಷ್ಟು ಜನ ಪಾಲ್ಗೊಳ್ಳುತ್ತಾರೆ, ಅಧಿವೇಶನದಲ್ಲಿ ರಾಜ್ಯ ರಾಜಕೀಯ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.