ಬೆಂಗಳೂರು,ಫೆ.4- ವಿಭಿನ್ನ, ವಿಶಿಷ್ಟವಾಗಿರುವ ಪ್ರಯತ್ನವಾಗಿರುವ ರಾಜ್ಯ ಸರ್ಕಾರದ ಐರಾವತ ಯೋಜನೆ ಯುವಜನರಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಪರಿವರ್ತನೆ ತರಲಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅಭಿಪ್ರಾಯಪಟ್ಟರು.
ಐರಾವತ ಯೋಜನೆ ಫಲಾನುಭವಿಗಳಿಗೆ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಗಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಊಬರ್ ಸಂಸ್ಥೆಯೊಂದಿಗಿನ ಒಡಂಬಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್ಸಿಎಸ್ಟಿ ನಿರುದ್ಯೋಗಿಗಳ ಬದುಕು ರೂಪಿಸಲು ಸಮಾಜ ಕಲ್ಯಾಣ ಇಲಾಖೆ ಐರಾವತದಂತಹ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ.ಈ ಯೋಜನೆಯಡಿ ಕಾರ್ಯ ನಿರ್ವಹಿಸಲು ಅನುವಾಗುವಂತೆ ಮನೆ ಬಾಗಿಲಿಗೆ ಟ್ಯಾಕ್ಸಿ ಸೌಲಭ್ಯ ಒದಗಿಸುತ್ತಿರುವ ಊಬರ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯುವ ಜನಾಂಗ ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಳ್ಳಲು ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು.ಅಂಬೇಡ್ಕರ್ ಅಭಿವೃದ್ದಿ ನಿಗಮದ ಮೂಲಕ ಈ ಯೋಜನೆಯಡಿ ಗರಿಷ್ಠ ಐದು ಲಕ್ಷ ಸಹಾಯಧನ ನೀಡಲಾಗುವುದು. ಪ್ರಾಥಮಿಕ ಹಂತದಲ್ಲಿ ನಗರ ಪ್ರದೇಶಗಳಾದ ಮೈಸೂರು, ಬೆಂಗಳೂರು ಹಾಗೂ ಮಂಗಳೂರು ನಗರಗಳಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ.
ಕ್ರಮೇಣ ಇನ್ನಿತರ ಟ್ಯಾಕ್ಸಿ ಕಂಪನಿಗಳ ಸಹಯೋಗದಲ್ಲಿ ರಾಜ್ಯದ ಇತರೆಡೆ ಐರಾವತ ಸೇವೆ ವಿಸ್ತರಿಸುವ ಗುರಿ ಹೊಂದಲಾಗಿದೆ.ಉದ್ಯೋಗ ಭರವಸೆ ಒದಗಿಸುವ ಯೋಜನೆ ಇದಾಗಿದ್ದು, ಸಹಾಯಧನ ಪಡೆದು ಟ್ಯಾಕ್ಸಿ ಖರೀದಿಸಿ ತಾವೇ ಸ್ವತಃ ಮಾಲೀಕರಾಗುವ ಉತ್ತಮ ಅವಕಾಶ ಪಡೆದಿದೆ ಎಂದು ವಿವರಿಸಿದರು.
ಎಸ್ಸಿ ವರ್ಗಕ್ಕೆ ಸೇರಿದವರಿಗೆ 3500 ವಾಹನಗಳನ್ನು ಒದಗಿಸಲು 175 ಕೋಟಿ ರೂ.ಎಸ್ಟಿಗಳಿಗೆ 1000 ಟ್ಯಾಕ್ಸಿ ಒದಗಿಸಲು 50 ಕೋಟಿ ರೂ.ಅನುದಾನ ತೆಗೆದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎನ್.ನಾರಾಯಣಸ್ವಾಮಿ, ಶ್ರೀನಿವಾಸ್, ರಾಘವೇಂದ್ರ, ಊಬರ್ ಕಂಪನಿಯ ಬೆಂಗಳೂರು ಪ್ರಧಾನ ವ್ಯವಸ್ಥಾಪಕ ಕನಕ ಮಲ್ಹೋತ್ರ ಮತ್ತಿತರರು ಇದ್ದರು.