ಬೆಂಗಳೂರು,ಫೆ.4- ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಮಹಾಸಮರಕ್ಕೆ ಎಲ್ಲ ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ರಾಷ್ಟ್ರದ ಗಮನ ಸೆಳೆಯುವ ಸಾಧ್ಯತೆ ಇದೆ.
ಕಾರಣ ಈ ಕ್ಷೇತ್ರ ಒಂದೇ ಸಮುದಾಯದ ಇಬ್ಬರು ರಾಜಕೀಯ ದೈತ್ಯರ ಸ್ಪರ್ಧೆಗೆ ವೇದಿಕೆಯಾಗುತ್ತಿದೆ.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ ಗಳಲ್ಲೊಬ್ಬರಾಗಿರುವ ಕೇಂದ್ರ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರ ಸ್ಪರ್ಧೆಯಿಂದ ಬೆಂಗಳೂರು ಉತ್ತರ ರಾಜ್ಯದಲ್ಲೇ ಹೈವೋಲ್ಟೇಜ್ ಕ್ಷೇತ್ರವಾಗಲಿದೆ.
ಆದರೆ ಈವರೆಗೂ ಈ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ದೇವೇಗೌಡ ಇಲ್ಲವೇ ಬಿಜೆಪಿಯಿಂದ ಎಸ್.ಎಂ.ಕೃಷ್ಣ ಸ್ಪರ್ಧಿಸುವ ಬಗ್ಗೆ ಖಚಿತ ತೀರ್ಮಾನಕ್ಕೆ ಬಂದಿಲ್ಲ.
ಒಂದು ವೇಳೆ ದೇವೇಗೌಡರು ಈವರೆಗೂ ಸ್ಪರ್ಧಿಸುತ್ತಿದ್ದ ಹಾಸನವನ್ನು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಧಾರೆ ಎರೆದು ಬೆಂಗಳೂರು ಉತ್ತರಕ್ಕೆ ವಲಸೆ ಬಂದರೆ ಬಿಜೆಪಿ ಎಸ್.ಎಂ.ಕೃಷ್ಣರಿಗೆ ಮಣೆ ಹಾಕಲು ಮುಂದಾಗಿದೆ.
ಸದ್ಯಕ್ಕೆ ಸಕ್ರಿಯ ರಾಜಕಾರಣದಿಂದ ದೂರ ಉಳಿದಿರುವ ಎಸ್.ಎಂ.ಕೃಷ್ಣ ಮತ್ತೆ ಅಖಾಡಕ್ಕಿಳಿಯಲಿದ್ದಾರೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಬಿಜೆಪಿ ವರಿಷ್ಠರು ಅವರನ್ನು ಮನವೊಲಿಸಿದರೆ ಗೌಡರ ವಿರುದ್ಧ ಮತ್ತೆ ಬೆಂಗಳೂರು ಉತ್ತರದಲ್ಲಿ ತೊಡೆತಟ್ಟುವುದು ಖಚಿತ ಎಂದು ಹೇಳಲಾಗುತ್ತಿದೆ.
ಬದಲಾದ ರಾಜಕೀಯ ಸಮೀಕರಣ:
ಈವರೆಗೂ ಬೆಂಗಳೂರು ಉತ್ತರದಿಂದ ಹಾಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರೇ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಡಿವಿಎಸ್ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಆರಂಭಿಸಿದ್ದರು.
ಕಾರ್ಯಕರ್ತರ ಸಭೆ, ವಿಧಾನಸಭಾ ಕ್ಷೇತ್ರವಾರು ಕಾರ್ಯಕ್ರಮಗಳು ಸೇರಿದಂತೆ ನಾನಾ ರೀತಿಯ ತಂತ್ರಗಳನ್ನು ರೂಪಿಸುವಲ್ಲಿ ಮಗ್ನರಾಗಿದ್ದರು.ಆದರೆ ಯಾವಾಗ ಬೆಂಗಳೂರು ಉತ್ತರದಿಂದ ದೇವೇಗೌಡರು ಸ್ಪರ್ಧಿಸುತ್ತಿದ್ದಾರೆ ಎಂಬ ಮಾತು ಕೇಳಿಬಂತೋ ಬಿಜೆಪಿ ತನ್ನ ಕಾರ್ಯತಂತ್ರವನ್ನು ಬದಲಿಸಿದೆ.
ಬೆಂಗಳೂರು ಉತ್ತರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಮಲ್ಲೇಶ್ವರಂ ಹೊರತುಪಡಿಸಿದರೆ 6 ಕಡೆ ಕಾಂಗ್ರೆಸ್ ಮತ್ತು ಒಂದು ಕಡೆ ಜೆಡಿಎಸ್ ಒಂದು ಕಡೆ ಚುನಾವಣೆಯಲ್ಲಿ ಗೆದ್ದಿತ್ತು.
ಶೇಕಡ ಮತವಾರು ಗಳಿಕೆಯಲ್ಲಿ ಬಿಜೆಪಿಯ ಮತ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ದೇವೇಗೌಡರು ಸ್ಪರ್ಧಿಸಿದರೆ ಸದಾನಂದಗೌಡರಿಗೆ ಹಿನ್ನಡೆಯಾಗಬಹುದೆಂಬ ಆತಂಕ ಬಿಜೆಪಿಯಲ್ಲಿದೆ.
ಅಲ್ಲದೆ ಈ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ನಿರ್ಣಾಯಕವಾಗಿರುವುದರಿಂದ ಸಹಜವಾಗಿ ಈ ಸಮುದಾಯದ ಮೇಲೆ ದೇವೇಗೌಡರಿಗೆ ಪ್ರಬಲವಾದ ಹಿಡಿತವಿದೆ.ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಿಜೆಪಿ ಎಸ್.ಎಂ.ಕೃಷ್ಣರಿಗೆ ಮಣೆ ಹಾಕಲು ಮುಂದಾಗಿದೆ.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೃಷ್ಣ ವಿಶೇಷವಾಗಿ ಬೆಂಗಳೂರು ಮಹಾನಗರಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ್ದರು.ಈಗಲೂ ಅವರು ನಗರದ ಮತದಾರರ ಮೇಲೆ ಸಾಕಷ್ಟು ಹಿಡಿತ ಹೊಂದಿದ್ದಾರೆ.
ಬಿಜೆಪಿ ಸೇರಿದ ನಂತರ ಸಕ್ರೀಯ ರಾಜಕಾರಣದಿಂದ ದೂರ ಉಳಿದಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಅವರು ಪಕ್ಷದ ಅಭ್ಯರ್ಥಿಗಳ ಪರ ಅಲ್ಲಲ್ಲಿ ಪ್ರಚಾರ ನಡೆಸಿದ್ದರು.ಆದರೆ ಬಿಜೆಪಿಯ ಯಾವುದೇ ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೆ ಸದ್ಯಕ್ಕೆ ವಿಶ್ರಾಂತಿ ಜೀವನ ಸಾಗಿಸುತ್ತಿದ್ದಾರೆ.
ಚಿಕ್ಕಮಗಳೂರು-ಉಡುಪಿಗೆ ಡಿವಿಎಸ್ ಶಿಫ್ಟ್:
ಒಂದು ವೇಳೆ ಎಸ್.ಎಂ.ಕೃಷ್ಣ ಬೆಂಗಳೂರು ಉತ್ತರದಿಂದ ಸ್ಪರ್ಧಿಸಿದರೆ ಸದಾನಂದಗೌಡರನ್ನು ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಶಿಫ್ಟಾಗುವ ಸಾಧ್ಯತೆ ಇದೆ.
ಈ ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧಿಸುವ ಬಗ್ಗೆ ಒಲವು ತೋರುತ್ತಿಲ್ಲ. ಜೊತೆಗೆ ಕ್ಷೇತ್ರದಲ್ಲಿ ಅವರ ಬಗ್ಗೆ ಶಾಸಕರು ಮತ್ತು ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ.
ಈ ಅಸಮಾಧಾನವನ್ನು ಸರಿದೂಗಿಸಲು ಸದಾನಂದಗೌಡರನ್ನು ಅಲ್ಲಿಂದ ಸ್ಪರ್ಧಿಸಲು ಹೈಕಮಾಂಡ್ ಸೂಚಿಸುವ ಸಾಧ್ಯತೆ ಇದೆ. ಈಗಾಗಲೇ ಒಂದು ಬಾರಿ ಇಲ್ಲಿಂದ ಅವರು ಸ್ಪರ್ಧಿಸಿ ಆಯ್ಕೆಯಾಗಿದ್ದರು.