
ಬೆಂಗಳೂರು,ಫೆ.4- 1989ರಿಂದ ಇಲ್ಲಿಯವರೆಗೆ ಬಿಬಿಎಂಪಿ ಮಾಡಿರುವ ಸಾಲದ ಬಗ್ಗೆ ಶ್ವೇತ ಪತ್ರ ಹೊರಡಿಸಲು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.
ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ದಿನಾಂಕ: 17.11.2018ರಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಪತ್ರ ಬರೆದು 1989ರಿಂದಲ್ಲಿ ಇಲ್ಲಿಯವರೆಗೆ ಬಿಬಿಎಂಪಿಯಲ್ಲಿ ಯಾವ ಯಾವ ಪಕ್ಷಗಳ ಆಡಳಿತಾವಧಿಯಲ್ಲಿ ಎಷ್ಟೆಷ್ಟು ಸಾಲ ಮಾಡಲಾಗಿದೆ ಎಂಬುದರ ಬಗ್ಗೆ ಶ್ವೇತ ಪತ್ರ ಹೊರಡಿಸುವಂತೆ ಪತ್ರ ಬರೆದಿದ್ದರು.
ಪದ್ಮನಾಭರೆಡ್ಡಿಯವರ ಪತ್ರದ ಹಿನ್ನೆಲೆ ಡಿಸಿಎಂ ಪರಮೇಶ್ವರ್ ಅವರು, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜನಾಮೂರ್ತಿಯವರಿಗೆ ಸೂಚನೆ ನೀಡಿ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.
ಹಿನ್ನೆಲೆ: ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಬಿಬಿಎಂಪಿ 11 ಪಾರಂಪರಿಕ ಕಟ್ಟಡಗಳನ್ನು ಅಡಮಾನವಿಟ್ಟು ಸಾಲ ಪಡೆದಿತ್ತು.ಕಾರಣ ಹಿಂದಿನ ಆಡಳಿತಾಧಿಕಾರಿಗಳ ಅವಧಿಯಲ್ಲಿ ಮಾಡಲಾದ ಸಾಲ ತೀರಿಸಲು ಈ ಕ್ರಮ ಕೈಗೊಳ್ಳಲಾಗಿತ್ತು ಎಂದು ಬಿಜೆಪಿ ಸ್ಪಷ್ಟನೆ ನೀಡಿತ್ತು.ಇದೇ ವಿಚಾರ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜ್ ಹಾಗೂ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿಯವರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.
ಹೀಗಾಗಿ ಪದ್ಮನಾಭರೆಡ್ಡಿಯವರು ಡಿಸಿಎಂಗೆ ಪತ್ರ ಬರೆದು 1989ರಿಂದ ಈ ವರೆಗೆ ಯಾರ್ಯಾರ ಆಡಳಿತಾವಧಿಯಲ್ಲಿ ಎಷ್ಟೆಷ್ಟು ಸಾಲ ಮಾಡಲಾಗಿದೆ ಎಂಬುದರ ಬಗ್ಗೆ ಶ್ವೇತ ಪತ್ರ ಹೊರಡಿಸುವಂತೆ ಒತ್ತಾಯಿಸಿದ್ದರು.
ಅಂತೆಯೇ ಡಿಸಿಎಂ ಪರಮೇಶ್ವರ್ ಬಿಬಿಎಂಪಿ ಆಯುಕ್ತರಿಗೆ ಈ ಕುರಿತು ಶೀಘ್ರ ಕ್ರಮಕ್ಕೆ ಸೂಚಿಸಿದ್ದಾರೆ.
ಶ್ವೇತ ಪತ್ರ ಹೊರಡಿಸಿದ ಮೇಲೆಯೇ ಯಾರ್ಯಾರು ಎಷ್ಟೆಷ್ಟು ತೆರಿಗೆ ಹಣ ತಿಂದು ತೇಗಿದ್ದಾರೆ ಎಂಬುದು ಬಯಲಾಗಲಿದೆ.