![Rajeev-Kumar](http://kannada.vartamitra.com/wp-content/uploads/2019/02/Rajeev-Kumar-678x368.jpg)
ಕೊಲ್ಕತಾ: ಇಲ್ಲಿನ ಪೊಲೀಸ್ ಮತ್ತು ಸಿಬಿಐ ನಡುವಣ ಜಟಾಪಟಿ ಬಗ್ಗೆ ದೇಶದಾದ್ಯಂತ ಸುದ್ದಿಯಾಗುತ್ತಿದೆ. ಶಾರದಾ ಚಿಟ್ಫಂಡ್ ಮತ್ತು ರೋಸ್ ವ್ಯಾಲಿ ಪಾಂಝಿ ಹಗರಣದ ವಿಚಾರಣೆ ನಡೆಸಲು ಕೊಲ್ಕತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಮನೆಗೆ ಸಿಬಿಐ ಅಧಿಕಾರಿಗಳು ಮುತ್ತಿಗೆ ಹಾಕಿದ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಸಿಬಿಐ ನಡೆಯ ಬಗ್ಗೆ ಆಕ್ರೋಶ ಹೊರಹಾಕಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸುತ್ತಿದ್ದಾರೆ. ದೇಶದಾದ್ಯಂತ ಬಿರುಗಾಳಿ ಎಬ್ಬಿಸಿರುವ ಈ ಒಂದು ಪ್ರಕರಣದಲ್ಲಿ ಕೇಳಿ ಬರುತ್ತಿರುವ ಹೆಸರು ಪೊಲೀಸ್ ಅಧಿಕಾರಿ ರಾಜೀವ್ ಕುಮಾರ್. ಅಷ್ಟಕ್ಕೂ ಅವರು ಯಾರು?
ರಾಜೀವ್ ಕುಮಾರ್ ಯಾರು?
1989 ರ ಬಂಗಾಳ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ರಾಜೀವ್ ಕುಮಾರ್ ಪ್ರಸ್ತುತ ಕೊಲ್ಕತಾ ಪೊಲೀಸ್ ಕಮೀಷನರ್. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಅಧಿಕಾರಿಗಳಲ್ಲಿ ಇವರು ಒಬ್ಬರು ಎಂದು ಹೇಳಲಾಗಿದೆ. ಮೂಲತಃ ಉತ್ತರ ಪ್ರದೇಶದ ಚಂದೌಸಿ ನಿವಾಸಿಯಾಗಿರುವ ರಾಜೀವ್ ಕುಮಾರ್ ಅವರ ತಂದೆ ಆನಂದ್ ಕುಮಾರ್. ಚಂದೌಸಿ ಎಸ್ಎಂ ಕಾಲೇಜಿನಲ್ಲಿ ರಾಜೀವ್ ಅವರ ತಂದೆ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದೇ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ರಾಜೀವ್ ಕುಮಾರ್ ಉತ್ತರ ಪ್ರದೇಶದ ಕೇಡರ್ನ ಐಪಿಎಸ್ ಅಧಿಕಾರಿ. ಈ ಬಳಿಕ ಪಶ್ಚಿಮ ಬಂಗಾಳಕ್ಕೆ ವರ್ಗಾವಣೆಯಾಗಿದ್ದರು.
ಏನಿದು ಪ್ರಕರಣ?
ಪಶ್ಚಿಮ ಬಂಗಾಳದಲ್ಲಿ ಸಕ್ರೀಯವಾಗಿದ್ದ ಶಾರದಾ ಸಮೂಹದ ಹಣಕಾಸು ಹಗರಣವಿದು. ಇದರಲ್ಲಿ 200ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ಭಾಗಿಯಾಗಿದ್ದವು ಎಂಬುದು ವಿಶೇಷ. ಹಗರಣ ಬಯಲಾಗುವ ಮುಂಚೆ 17 ಲಕ್ಷ ಠೇವಣಿದಾರರಿಂದ ಶಾರದಾ ಸಂಸ್ಥೆಯು 200 ರಿಂದ 300 ಶತಕೋಟಿ ರೂಪಾಯಿ ಸಂಗ್ರಹಿಸಿತ್ತು. ಇದರಲ್ಲಿ ಮುಖ್ಯವಾಗಿ ಉದ್ಯಮಿಗಳು ಹಾಗೂ ರಾಜಕಾರಣಿಗಳು ಶಾಮೀಲಾಗಿದ್ದರು.
ಈ ಹಗರಣ ಬೆಳಕಿಗೆ ಬರುತ್ತಿದ್ದಂತೆ ಪಶ್ಚಿಮ ಬಂಗಾಳ ಸರಕಾರ ತನಿಖಾ ಆಯೋಗವನ್ನು ರಚಿಸಿ ಪ್ರಕರಣವನ್ನು ಕೈಗೆತ್ತಿಕೊಂಡಿತು. ಅಲ್ಲದೆ ಕಡಿಮೆ ಆದಾಯ ಹೂಡಿಕೆದಾರರಿಗೆ ಹಣವನ್ನು ಮರಳಿಸಲು 500 ಕೋಟಿ ರೂ. ನಿಧಿಯನ್ನು ಸ್ಥಾಪಿಸಲಾಯಿತು. ಏತನ್ಮಧ್ಯೆ, ಕೇಂದ್ರ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳು ಪ್ರತ್ಯೇಕವಾಗಿ ತನಿಖೆ ನಡೆಸಿತು. ಈ ವೇಳೆ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ರಾಜಕೀಯ ನಾಯಕರುಗಳ ನಂಟು ಕಂಡು ಬಂದಿದ್ದರಿಂದ ಪ್ರಕರಣ ಪ್ರಾಮುಖ್ಯತೆ ಪಡೆಯಿತು. ಈ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ 2014ರಲ್ಲಿ ಎಲ್ಲಾ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆದೇಶ ನೀಡಿತು.
ರಾಜೀವ್ ಕುಮಾರ್ಗೂ ಪ್ರಕರಣಕ್ಕೂ ಏನು ಸಂಬಂಧ?
ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಅವರ ಹೆಸರು ಶಾರದಾ ಚಿಟ್ ಫಂಡ್ ಹಗರಣದಲ್ಲಿ ತಳುಕು ಹಾಕಿಕೊಂಡಿದೆ. 2013 ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರಕಾರ ರಚಿಸಿದ ತನಿಖಾ ಆಯೋಗವನ್ನು ಮುನ್ನೆಡೆಸಿದವರು ರಾಜೀವ್ ಕುಮಾರ್. ಈ ತನಿಖೆಯ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಕಡತಗಳು ಮತ್ತು ದಾಖಲೆಗಳು ನಾಪತ್ತೆಯಾಗಿದ್ದವು. ಈ ಬಗ್ಗೆ ವಿಚಾರಣೆ ನಡೆಸಲು ಸಿಬಿಐ ತಂಡ ರಾಜೀವ್ ಕುಮಾರ್ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಬಯಸುತ್ತಿದೆ. ಇತ್ತೀಚೆಗೆ ಈ ಪ್ರಕರಣಕ್ಕೆ ಸಂಬಂಧಿಸಿ ಚಿತ್ರ ನಿರ್ಮಾಪಕ ಶ್ರೀಕಾಂತ್ ಮೋಹಿತ ಅವರನ್ನು ಬಂಧಿಸಲಾಗಿತ್ತು.
ಆ ನಂತರ ಪೊಲೀಸ್ ಕಮೀಷನರ್ ರಾಜೀವ್ ಕುಮಾರ್ ನಾಪತ್ತೆಯಾಗಿದ್ದರು. ಸಿಬಿಐ ಬಂಧನ ಭೀತಿಯಿಂದ ಅವರು ತಲೆಮರೆಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಭಾನುವಾರ ಸಂಜೆ ಕೊಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ವಿಚಾರಣೆ ನಡೆಸಲು 40 ಸಿಬಿಐ ಅಧಿಕಾರಿಗಳ ತಂಡ ತೆರಳಿತ್ತು. ಈ ವೇಳೆ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಅವರ ಮನೆಯ ಮುಂದೆ ಸಿಬಿಐ ಅಧಿಕಾರಿಗಳನ್ನು ತಡೆಯಲಾಗಿದೆ. ಬಳಿಕ, ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲವು ಸಿಬಿಐ ಅಧಿಕಾರಿಗಳನ್ನೇ ಬಂಧಿಸಲಾಗಿತ್ತು.