
ಬೆಂಗಳೂರು, ಫೆ.4-ರೈತರು, ಬಡವರು, ಮಧ್ಯಮವರ್ಗದವರು ಸೇರಿದಂತೆ ಎಲ್ಲ ವರ್ಗದವರಿಗೂ ಅನುಕೂಲವಾಗುವಂತ ಬಜೆಟ್ ಮಂಡಿಸಲಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸಂಪಾದಕರೊಂದಿಗಿನ ಸಭೆಯಲ್ಲಿ ಈ ಮಾಹಿತಿ ನೀಡಿದ ಅವರು, ತಾವು ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಒಟ್ಟಾಗಿ ಸಮಾಲೋಚಿಸಿ ಆಯವ್ಯಯ ಸಿದ್ಧಪಡಿಸುತ್ತಿದ್ದೇವೆ. ಮೈತ್ರಿ ಸರ್ಕಾರದಲ್ಲಿ ಕನಿಷ್ಠ ಕಾರ್ಯಕ್ರಮಗಳಿವೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಜಾರಿಗೆ ತಂದ ಕಾರ್ಯಕ್ರಮಗಳನ್ನು ಮುಂದುವರೆಸಬೇಕಾಗಿದೆ. ಎಲ್ಲವನ್ನೂ ಸರಿದೂಗಿಸಿಕೊಂಡು ಸರ್ವರ ಪರವಾದ ಬಜೆಟ್ ಮಾಡಿಸುವ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಒಟ್ಟು ಜನಸಂಖ್ಯೆಯ ಶೇ.75ರಷ್ಟು ಜನರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಕಾರ್ಡ್‍ದಾರರಿಗೆ ನೀಡುವ ಸೌಲಭ್ಯಕ್ಕೆ ಹಣ ಹೊಂದಿಸುವುದು ಸವಾಲಿನ ಕೆಲಸವಾಗಿದೆ. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಸರ್ವಶೀಕ್ಷಣ ಅಭಿಯಾನ, ಆಯುಷ್ಮಾನ್ ಭಾರತ್, ಸಮವಸ್ತ್ರ ಯೋಜನೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಇನ್ನೂ ಹಣ ನೀಡಿಲ್ಲ ಎಂದು ಹೇಳಿದರು.
ಹೊರದೇಶಗಳಿಂದ ಬಂಡವಾಳ ಹೂಡಲು ಉದ್ದಿಮೆದಾರರು ಆಗಮಿಸುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದ ಬ್ಯಾಂಕ್‍ಗಳು ಕೂಡ ಮುಂದೆ ಬಂದಿದ್ದು, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಂಡವಾಳ ಹೂಡಿಕೆಯಾಗಲಿದೆ. ವಿದ್ಯಾವಂತ ಯುವ ಸಮುದಾಯಕ್ಕೆ ಉದ್ಯೋಗ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆ. ಹೀಗಾಗಿ 9 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ ಸ್ಥಾಪನೆಗೆ ಉತ್ತೇಜನ ನೀಡುತ್ತಿದ್ದು, ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.
ರಾಜ್ಯದಲ್ಲಿ ತೆರಿಗೆ ಸಂಗ್ರಹದ ಪ್ರಮಾಣ ನಿರೀಕ್ಷೆಗಿಂತ ಉತ್ತಮವಾಗಿದೆ. ರಾಜ್ಯದಲ್ಲಿ ಹಣಕಾಸಿನ ಕೊರತೆ ಇಲ್ಲ ಆರ್ಥಿಕ ಪರಿಸ್ಥಿತಿ ಭದ್ರವಾಗಿದೆ ಎಂದು ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದ ಮೂರು ಕ್ಷೇತ್ರಗಳನ್ನು ಪಡೆಯುವ ಬಗ್ಗೆ ಚುನಾವಣಾ ಪೂರ್ವ ಹೊಂದಾಣಿಕೆ ಸಂದರ್ಭದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.
ಪಶ್ಚಿಮ ಬಂಗಾಳದಲ್ಲಿ ಸಿಬಿಐನವರು ಹಿರಿಯ ಪೊಲೀಸ್ ಅಧಿಕಾರಿಯನ್ನು ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಪ್ರಧಾನ ನರೇಂದ್ರ ಮೋದಿಯವರು ಪ್ರಾದೇಶಿಕ ಪಕ್ಷಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರೈತರ ಬೆಳೆ ಸಾಲ 47 ಸಾವಿರ ಕೋಟಿ ಮನ್ನಾ ಮಾಡುತ್ತಿದ್ದು, 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೃಷಿ ಪಂಪ್‍ಸೆಟ್‍ಗಳಲ್ಲಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಲು 300 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.