
ಬೆಂಗಳೂರು, ಫೆ.4- ಶಿವರಾಮ ಕಾರಂತ ಬಡಾವಣೆ ಹೆಸರಿನಲ್ಲಿ ರೈತರು ಮತ್ತು ಸ್ಥಳೀಯ ನಾಗರಿಕರ ಮೇಲೆ ಗದಾ ಪ್ರಹಾರ ನಡೆಸಲು ಬಿಡಿಎ ಮುಂದಾಗಿದೆ.
ಕಳೆದ 2008ರಲ್ಲಿ ಆರಂಭವಾಗಿದ್ದ ಶಿವರಾಮಕಾರಂತ ಬಡಾವಣೆ ಕುಂಟುತ್ತಾ ಸಾಗಿ ಕೊನೆಗೆ ರಾಜ್ಯ ಹೈಕೋರ್ಟ್ ಅದಕ್ಕೆ ಇತಿಶ್ರೀ ಹಾಡಿತ್ತು . ಆದರೆ ಈಗ ಮತ್ತೆ ರಾಜ ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ತಂದಿರುವ ಆದೇಶದಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ನಿವಾಸಿಗಳು ಹಾಗೂ ಸಣ್ಣ ರೈತರು ಮುಂದಿನ ದಿಕ್ಕು ತೋಚದಂತಹ ಸ್ಥಿತಿ ತಲುಪಿದ್ದು , ಹೋರಾಟದ ಹಾದಿ ಹಿಡಿದಿದ್ದಾರೆ.
ಈಗಾಗಲೇ ಈ ಹಿಂದೆ ಬಡಾವಣೆ ನಿರ್ಮಾಣ ಕೈ ಬಿಟ್ಟ ಕಾರಣ ಹಲವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಿವೇಶನಗಳನ್ನು ನಿರ್ಮಿಸಲು ಅರ್ಜಿ ಸಲ್ಲಿಸಿ ಅನುಮತಿ ಪಡೆದಿದ್ದಾರೆ.ಇದಲ್ಲದೆ ಈಗ ಸರ್ಕಾರವೇ ಬಡವರಿಗೆ ಮನೆಗಳನ್ನು ಕಟ್ಟಿಸಿಕೊಟ್ಟಿದೆ.
ಹಲವಾರು ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ , ಸಮುದಾಯ ಭವನ , ವಸತಿ ಸಮುಚ್ಚಯಗಳು ಸೇರಿದಂತೆ ಸಾವಿರಾರು ಮಂದಿ ಈಗಾಗಲೇ ಈ ನಿವೇಶನಗಳನ್ನು ಖರೀದಿಸಿ ಮನೆ ಕಟ್ಟಡಗಳನ್ನು ಕಟ್ಟಿ ಬದುಕು ನಡೆಸುತ್ತಿದ್ದಾರೆ.
ಆದರೆ ದಿಢೀರನೆ ಈ ನೋಟೀಸನ್ನು ಜಾರಿ ಮಾಡಿ ಇದು ಶಿವರಾಮ ಕಾರಂತ ಬಡಾವಣೆಗೆ ಸೇರಿದ್ದು.ಜಾಗ ಖಾಲಿ ಮಾಡುವಂತೆ ಹೇಳುತ್ತಿರುವುದು ನಿವಾಸಿಗಳನ್ನು ಕಂಗೆಡಿಸುವಂತೆ ಮಾಡಿದೆ.
ರಾಜ್ಯ ಸರ್ಕಾರದ ಈ ಧೋರಣೆ ವಿರುದ್ಧ ದನಿ ಎತ್ತಲು ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಾಗಿದೆ. ಬಿಡಿಎ ತನ್ನ ನಿಯಮಗಳನ್ನು ಹಿಡಿದುಕೊಂಡು ಮನೆ ಮನೆಗೆ ನೋಟೀಸ್ ಹಂಚುವ ಬದಲು ರಿಜಿಸ್ಟರ್ ಪೋಸ್ಟ್ ಮಾಡುತ್ತಿದ್ದಾರೆ.
ಇಲ್ಲಿ ಈಗ ಸರ್ಕಾರ 10 ವರ್ಷದ ಬಳಿಕ ಪುನಃ ಬಡಾವಣೆ ನಿರ್ಮಿಸಲು ಮುಂದಾದರೆ ಈ ಮನೆಗಳನ್ನು ಒಡೆದು ಪುನಃ ನಿವೇಶನ ಹಂಚುತ್ತೀರಾ. ಈಗಾಗಲೇ ಅರ್ಕಾವತಿ ಬಡಾವಣೆ , ವಿಶ್ವೇಶ್ವರಯ್ಯ ಬಡಾವಣೆ, ಕೆಂಪೇಗೌಡ ಬಡಾವಣೆಗಳನ್ನು ನಿರ್ಮಿಸಿ ಅಲ್ಲಿನ ರೈತರಿಗೆ ಸರಿಯಾದ ಪರಿಹಾರ ನೀಡದೆ ಅಲೆದಾಡಿಸುತ್ತಿದ್ದೀರಿ. ಹೀಗಿರುವಾಗ ಈಗ ಶಿವರಾಮ ಕಾರಂತ ಬಡಾವಣೆ ಬೇಕೆ ಎಂಬ ಬಗ್ಗೆ ಚಿಂತಿಸಬೇಕು.
ಸುಪ್ರೀಂಕೋರ್ಟ್‍ನ ಆದೇಶವೊಂದರ ಪ್ರಕಾರ ಜಮೀನು ವಶಪಡಿಸಿಕೊಂಡ ಐದು ವರ್ಷಗಳಲ್ಲಿ ನಿವೇಶನಗಳನ್ನು ನಿರ್ಮಿಸಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಆದರೆ ಇಲ್ಲಿ ಅದೇನೂ ಆಗಿಲ್ಲ. ಸರ್ಕಾರವೇ ಇದನ್ನು ನಿಲ್ಲಿಸಿ ಖಾಸಗಿ ಬಡಾವಣೆಯನ್ನು ನಿರ್ಮಿಸಲು ಈಗ ಮತ್ತೆ ರೈತರನ್ನು ಒಕ್ಕಲೆಬ್ಬಿಸಲು ಮತ್ತು ಸ್ಥಳೀಯ ನಿವಾಸಿಗಳಿಗೆ ಆತಂಕ ಸೃಷ್ಟಿಸುವ ಸನ್ನಿವೇಶಗಳನ್ನು ಸೃಷ್ಟಿಸುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಏನಿದು ಪ್ರಕರಣ: ಕಳೆದ 2008ರಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ದಾಸರಹಳ್ಳಿ ಹಾಗೂ ಯಲಹಂಕ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 1300 ಎಕರೆಗೂ ಹೆಚ್ಚು ಜಮೀನನ್ನು ಗುರುತಿಸಿ ಅದನ್ನು ಬಿಡಿಎ ವಶಕ್ಕೆ ಪಡೆದಿತ್ತು. ನಂತರದ ದಿನಗಳಲ್ಲಿ ಯೋಜನೆಯು ನೆನೆಗುದಿಗೆ ಬಿದ್ದಿತ್ತು.
ಕೆಲ 70ಕ್ಕೂ ಹೆಚ್ಚು ರೈತರು ಹೈಕೋರ್ಟ್ ಮೆಟ್ಟಿಲೇರಿ ಬಡಾವಣೆ ನಿರ್ಮಾಣ ಕಾರ್ಯವನ್ನು ಕೈ ಬಿಡುವಂತೆ ಸರ್ಕಾರಕ್ಕೆ ಸೂಚನೆ ನೀಡುವಂತೆ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ 2018ರ ಆಗಸ್ಟ್‍ನಲ್ಲಿ ದಿಢೀರನೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿ ವಾಸ್ತವ ಸ್ಥಿತಿಗಳನ್ನು ತಿಳಿಸದೆ 3342 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಲು ಬಿಡಿಎ ಪರ ತೀರ್ಪು ಬಂದಿತ್ತು.
ಆದರೆ ಇಲ್ಲಿ ದಿಢೀರನೆ ಸರ್ಕಾರ ಸುಪ್ರೀಂಕೋರ್ಟ್‍ಗೆ ಹೋಗಿದ್ದೇಕೆ? 10 ವರ್ಷದಲ್ಲಿ ಗುರುತಿಸಿದ್ದ ಪ್ರದೇಶಗಳಿಗೆ ಸ್ವತಃ ಬಿಡಿಎ ಎನ್‍ಒಸಿ ನೀಡಿತ್ತು. ಬಡಾವಣೆಗಳು ನಿರ್ಮಾಣಗೊಂಡು ಈಗ ಕೆಲವೇ ಪ್ರದೇಶದಲ್ಲಿ ರೈತರು ಉಳುಮೆ ಕಾರ್ಯ ಮಾಡುತ್ತಿದ್ದಾರೆ.
ಡಿ ನೋಟಿಫಿಕೇಶನ್: ಶಿವರಾಮ ಕಾರಂತ ಬಡಾವಣೆಗೆ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ 250 ಎಕರೆ, ಸಿದ್ದರಾಮಯ್ಯ ಅವರ ಅವಧಿಯಲ್ಲಿ 450 ಎಕರೆ ಡಿ ನೋಟಿಫಿಕೇಶನ್ ಆಗಿತ್ತು. ಈಗ ನಂತರದ ದಿನಗಳಲ್ಲಿ ಸ್ಥಳೀಯ ಭೂ ಮಾಲೀಕರು ಡಿಸಿ ಕನ್ವರ್ಷನ್ ಮಾಡಿ ಬಡಾವಣೆಗಳನ್ನು ನಿರ್ಮಿಸಿದ್ದರೂ ಈಗ ಅಲ್ಲಿ ಬಹುತೇಕ ಪ್ರದೇಶಗಳು, ವಸತಿ ಸಮುಚ್ಛಯಗಳು ತಲೆ ಎತ್ತಿವೆ. ಸಣ್ಣ ಕೈಗಾರಿಕೆಗಳು ಸೇರಿದಂತೆ ಹಲವಾರು ವಾಣಿಜ್ಯ ಕೇಂದ್ರಗಳು ಕೂಡ ಕಾರ್ಯ ನಿರ್ವಹಿಸುತ್ತಿವೆ.