ಎಲ್ಲ ಪ್ರಕರಣಗಳಲ್ಲಿಯೂ ಜೀವಹಾನಿಯಾದಾಗ ಸಮಾನ ಪರಿಹಾರ ನೀಡಲು ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು,ಫೆ.3-ಪ್ರಕೃತಿ ವಿಕೋಪ, ಆಕಸ್ಮಿಕ ಅವಘಡ, ಮಾನವ ನಿರ್ಮಿತ ಕಾರಣಗಳಿಂದ ಮೃತಪಟ್ಟವರಿಗೆ ಸಮಾನ ಪರಿಹಾರ ನೀಡಲು ಸರ್ಕಾರಿ ಆದೇಶ ಹೊರಬಿದ್ದಿದೆ.
ಪ್ರಕೃತಿ ವಿಕೋಪದಿಂದ ಜೀವ ಹಾನಿಯಾಗಿದ್ದಲ್ಲಿ ಕೇಂದ್ರ ಸರ್ಕಾರದ ಎನ್‍ಡಿಆರ್‍ಎಫ್ ಮಾರ್ಗಸೂಚಿ ಪ್ರಕಾರ ಕಂದಾಯ ಇಲಾಖೆ ವತಿಯಿಂದ ಪರಿಹಾರ ನೀಡಲಾಗುತ್ತಿತ್ತು.

ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಕೃಷಿ ಇಲಾಖೆ ವತಿಯಿಂದ, ಕಾಡುಪ್ರಾಣಿಗಳಿಂದ ಜೀವಹಾನಿಯಾಗಿದ್ದವರಿಗೆ ಅರಣ್ಯ ಇಲಾಖೆಯಿಂದ, ವಿದ್ಯುತ್ ಸಂಪರ್ಕದಿಂದ ಮರಣ ಹೊಂದಿದ್ದಲ್ಲಿ ಇಂಧನ ಇಲಾಖೆ ವತಿಯಿಂದ, ರಸ್ತೆ ಅವಘಡದಲ್ಲಿ ದುರ್ಮರಣವಾದರೆ ಸಾರಿಗೆ ಇಲಾಖೆ ವತಿಯಿಂದ ಪರಿಹಾರ ನೀಡಲಾಗುತ್ತಿತ್ತು.
ಇದನ್ನು ಹೊರತುಪಡಿಸಿ ಇನ್ನಿತರೆ ಪ್ರಕರಣಗಳಲ್ಲಿ ಜೀವಹಾನಿಯಾದರೆ ಮುಖ್ಯಮಂತ್ರಿ ಪರಿಹಾರನಿಧಿಯಿಂದ ಪರಿಹಾರ ನೀಡಲಾಗುತ್ತಿತ್ತು.ಈ ರೀತಿ ಪರಿಹಾರದಲ್ಲಿ ತಾರತಮ್ಯ ಹಾಗೂ ಪರಿಹಾರ ಮೊತ್ತದಲ್ಲಿ ವ್ಯತ್ಯಾಸವಿರುತ್ತಿತ್ತು.

ಆದ್ದರಿಂದ ಎಲ್ಲ ಪ್ರಕರಣದಲ್ಲಿಯೂ ಜೀವಹಾನಿಯಾದಾಗ ಸಮಾನ ಪರಿಹಾರ ನೀಡುವ ಮಾನದಂಡ ಕುರಿತಂತೆ ಹೊಸ ನೀತಿ ರೂಪಿಸಲಾಗಿದೆ.

ಜೀವನಹಾನಿ ಅಥವಾ ಶಾಶ್ವತ ಅಂಗವಿಕಲತೆಯಾದರೆ ಐದು ಲಕ್ಷ ರೂ. ಭಾಗಶಃ ಅಂಗವಿಕಲತೆ, ಅಂಗವಿಕಲತೆಯ ಶೇಕಡವಾರು ಸಮಾನವಾಗಿ ಗರಿಷ್ಠ 5 ಲಕ್ಷ ಹಾಗೂ ಕನಿಷ್ಠ ಒಂದು ಲಕ್ಷ , ತೀವ್ರವಾಗಿ ಗಾಯಗೊಂಡರೆ ಕನಿಷ್ಠ 20 ಸಾವಿರ, ಗರಿಷ್ಠ ಒಂದು ಲಕ್ಷ ವೈದ್ಯಕೀಯ ವೆಚ್ಚ ಸರ್ಕಾರಿ ಹಾಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ತಗಲುವ ವಾಸ್ತವಿಕ ವೆಚ್ಚವನ್ನು ಭರಿಸುವ ಆದೇಶ ಮಾಡಲಾಗಿದೆ.

ಎಲ್ಲ ಇಲಾಖೆಗಳಲ್ಲೂ ಏಕರೂಪದ ಪರಿಹಾರವನ್ನು ನೀಡಲು ಜಿಲ್ಲಾಧಿಕಾರಿಗಳ ಮೂಲಕ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ಪರಿಹಾರ ತಾರತಮ್ಯ ಹೋಗಲಾಡಿಸಿ ಸಮಾನವಾಗಿ ಪರಿಹಾರ ನೀಡುವ ಮಾನದಂಡದ ಹೊಸ ನೀತಿಯನ್ನು ರೂಪಿಸುವ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ ಸಮಗ್ರವಾಗಿ ಪರಿಶೀಲಿಸಿ ಏಕರೂಪದ ಪರಿಹಾರವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಮೂಲಕ ನೀಡುವುದು ಸೂಕ್ತವೆಂದು, ಕೈಗೊಂಡ ನಿರ್ಣಯದ ಮೇಲೆ ಈ ಆದೇಶವನ್ನು ಜಾರಿಗೊಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ