ತುಮಕೂರು, ಫೆ.3-ರೈತರು ಕಡಿಮೆ ನೀರಿನಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯುವ ಮೂಲಕ ಸ್ವಾವಲಾಂಬಿಗಳಾಗಬೇಕು ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಕರೆ ನೀಡಿದರು.
ತೋಟಗಾರಿಕೆ ಇಲಾಖೆ ಆವರಣದಲ್ಲಿಂದು ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನ ವೀಕ್ಷಿಸಿ ನಂತರ ಮಾತನಾಡಿದ ಅವರು, ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಸಾವಯವ ಕೃಷಿ ಮಾಡಿ ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ರೈತರು ಹೆಚ್ಚು ಇಳುವರಿ ಪಡೆಯುವಂತೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಹುಚ್ಚಯ್ಯ ಮಾತನಾಡಿ, ಜಿಲ್ಲಾ ಪಂಚಾಯತ್ ಸದಸ್ಯರು ಇಲಾಖೆಯ ಕಾರ್ಯಕ್ರಮಗಳನ್ನು ರೈತರಿಗೆ ಮತ್ತು ಜನರಿಗೆ ತಿಳಿಸುವಂತ ಕಾರ್ಯಕ್ರಮ ಮಾಡುತ್ತೇವೆ. ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳನ್ನು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಆಧುನಿಕ ಬೆಳೆ ಬೆಳೆಯುವ ತಂತ್ರಾಜ್ಞಾನಗಳ ಬಗ್ಗೆ ಹಾಗೂ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದರು.
ತೋಟಗಾರಿಕೆ ಉಪನಿರ್ದೇಶಕ ರಘು ಮಾತನಾಡಿ, ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಸುಮಾರು 226419 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು ರೈತರ ಬೇಡಿಕೆಗನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಪಂಚಾಯತ್ ಸದಸ್ಯರಾದ ನವ್ಯಬಾಬು, ಕೆ.ಯಶೋಧಮ್ಮ ಶಿವಣ್ಣ, ಡಾ.ನಾರಾಯಣಗೌಡ, ವಿಶ್ರಾಂತ ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ, ಜಿ.ಕೆ.ವಿ.ಕೆ ಬೆಂಗಳೂರು, ಸಂಘದ ಉಪಾಧ್ಯಕ್ಷರಾದ ಕೃಷ್ಣಪ್ಪ, ನಿರ್ದೇಶಕರುಗಳಾದ ಜಯಣ್ಣ, ವಾಸು, ಶ್ರೀಧರ್, ಮತ್ತಿತರರ ಅಧಿಕಾರಿಗಳು ಹಾಜರಿದ್ದರು.