ಹುಣಸೂರು,ಫೆ.3- ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹತ್ಯೆಯ ಘಟನೆಯನ್ನು ಮರುಸೃಷ್ಟಿಸಿ ಸಂಭ್ರಮಾಚರಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಗರದ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಸಮಿತಿ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನದಂದು ಗಾಂಧೀಜಿಯ ಸಿದ್ಧಾಂತ, ಸಂದೇಶ , ತ್ಯಾಗದ ಬಗ್ಗೆ ವಿದೇಶಗಳಲ್ಲಿ ಸ್ಮರಣೆ ನಡೆಯುವ ಸಂದರ್ಭದಲ್ಲಿ ಉತ್ತರ ಪ್ರದೇಶದ ಅಲಿಘಡದಲ್ಲಿ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಹಾಗೂ ಇತರ ಅವರ ಕಾರ್ಯಕರ್ತರು ಗಾಂಧೀಜಿ ಹತ್ಯೆ ಘಟನೆಯನ್ನು ಮರುಸೃಷ್ಟಿಸಿ ಸಂಭ್ರಮಾಚರಿಸಿದರು.
ಅಲ್ಲದೇ ಎಲ್ಲರಿಗೂ ಸಿಹಿ ತಿಂಡಿ ಹಂಚಿ ಗಾಂಧೀಜಿಯನ್ನು ಹತ್ಯೆಗೈದ ಹಂತಕ ಗೋಡ್ಸೆಯ ಪ್ರತಿಕೃತಿಗೆ ಮಾಲಾರ್ಪಣೆ ಮಾಡುವ ಮೂಲಕ ದೇಶದ ಪ್ರಥಮ ಭಯೋತ್ಪಾದನಾ ಕೃತ್ಯವನ್ನು ಮತ್ತೊಮ್ಮೆ ಬೆಂಬಲಿಸಿರುವ ಮತ್ತು ಭಯೋತ್ಪಾ ಕೃತ್ಯವನ್ನು ನಡೆಸುವಂತೆ ಪರೋಕ್ಷವಾಗಿ ಕರೆ ನೀಡಿರುವುದು ಖಂಡನೀಯ ಎಂದರು.
ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಎಸ್ ಡಿಪಿಐ ನ ಅಧ್ಯಕ್ಷರಾದ ಅಕ್ಮಲ್ ಅಹಮದ್ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.