ತುಮಕೂರು, ಫೆ.3- ಜಡ್ಡು ಹಿಡಿದಿದ್ದ ಪಾಲಿಕೆ ಆಡಳಿತ ಯಂತ್ರಕ್ಕೆ ನೂತನ ಆಯುಕ್ತ ಭೂಪಾಲ್ ಅವರು ಇಂದು ಬೆಳ್ಳಂಬೆಳಗ್ಗೆ ಚಳಿ ಬಿಡಿಸಿದ್ದಾರೆ.
ವಿವಿಧ ವಾರ್ಡ್ಗಳಲ್ಲಿ ಸಾಮಾನ್ಯ ವ್ಯಕ್ತಿಯಂತೆ ಸಂಚರಿಸಿದಾಗ ಕಂಡುಬಂದ ರಾಶಿ ರಾಶಿ ಕಸವನ್ನು ನೋಡಿ ಕೆಂಡಾಮಂಡಲರಾದ ಆಯುಕ್ತರು, ಎಷ್ಟು ಜನ ಪೌರ ಕಾರ್ಮಿಕರಿದ್ದಾರೆ, ಏನು ಕೆಲಸ ಮಾಡುತ್ತಿದ್ದಾರೆ, ನೀವೇನು ಮಾಡುತ್ತಿದ್ದೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರಸಭೆಯಿದ್ದಾಗಾಗಲಿ, ಪಾಲಿಕೆಯಾಗಿ ಮೇಲ್ದರ್ಜೆಗೇರಿದಾಗಲೂ ಯಾವೊಬ್ಬ ಅಧಿಕಾರಿಯೂ ನಗರ ಪ್ರದಕ್ಷಿಣೆ ಮಾಡಿ ಸಾರ್ವಜನಿಕರ ಕುಂದು-ಕೊರತೆ ಆಲಿಸಿರಲಿಲ್ಲ. ಇವರ ಸಾಮಾನ್ಯ ನಗರ ಪ್ರದಕ್ಷಿಣೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಇದೇ ವೇಳೆ ಕೆಲ ಆಂಗಡಿಗಳಲ್ಲಿ ತಪಾಸಣೆ ಮಾಡಿದಾಗ ಬಹುತೇಕ ಅಂಗಡಿಗಳ ಪರವಾನಗಿಯೇ ಇರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು ಪರವಾನಗಿಯೇ ಇಲ್ಲದ ಅಂಗಡಿ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ.ಬಾಗಿಲು ಮುಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೆಲ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ಗಳ ಮಾರಾಟ ಕಂಡುಬಂದಿದ್ದು, ಅವರಿಗೆ ದಂಡ ಕೂಡ ವಿಧಿಸಿದ್ದರು.
ನೂತನ ಕಟ್ಟಡ ಪರಿಶೀಲನೆ: ಪಾಲಿಕೆ ಆವರಣದಲ್ಲಿ 5.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಕಟ್ಟಡವನ್ನು ಪರಿಶೀಲಿಸಲು ಹೋದಾಗ ಅಲ್ಲಿ ಗುತ್ತಿಗೆದಾರರಾಗಲಿ, ಎಂಜಿನಿಯರ್ಗಳಾಗಲಿ ಸ್ಥಳದಲ್ಲಿರಲಿಲ್ಲ. ಇದರಿಂದ ಕುಪಿತರಾದ ಆಯುಕ್ತರು ಅಧಿಕಾರಿಗಳೇ ಈ ರೀತಿ ಮಾಡಿದರೆ ಕೆಲಸ ಕಟ್ಟಡ ಕಾಮಗಾರಿ ಮುಗಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಇನ್ನು ಪಾಲಿಕೆ ಸುತ್ತಮುತ್ತ ಅಡ್ಡಾದಿಡ್ಡಿ ವಾಹನಗಳ ಪಾರ್ಕಿಂಗ್, ತ್ಯಾಜ್ಯ ಕಂಡು ಇದು ಮೊದಲನೆ ಎಚ್ಚರಿಕೆ.ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸಿ.ಇದೇ ರೀತಿ ಮುಂದುವರಿದರೆ ಸಹಿಸಲು ಸಾಧ್ಯವಿಲ್ಲ. ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಎಂದು ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ತೆರಿಗೆ ಅಧಿಕಾರಿ ದಯಾನಂದ್ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.