ಸುಮಲತಾ ಅಂಬರೀಶ್‍ರವರನ್ನು ಕಣಕ್ಕಿಳಿಯುವಂತೆ ಕಾಂಗ್ರೇಸ್ ಕಾರ್ಯಕರ್ತರು ಮತ್ತು ಅಂಬಿ ಅಭಿಮಾನಿಳ ಒತ್ತಾಯ

ಬೆಂಗಳೂರು-ಮೈತ್ರಿ ಪಕ್ಷಗಳು ಲೋಕಸಭಾ ಚುನಾವಣೆಯನ್ನು ಜೊತೆಗೂಡಿ ಎದುರಿಸಲು ಚಿಂತನೆ ನಡೆಸಿವೆ.

ಆದರೆ, ಮಂಡ್ಯ ಮತ್ತು ಹಾಸನ ಕ್ಷೇತ್ರಗಳ ಉಭಯ ಕಾರ್ಯಕರ್ತರಲ್ಲಿ ಅಪಸ್ವರ ಕೇಳಿಬಂದಿತ್ತು.

ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಯುವಂತೆ ಮಂಡ್ಯ ಕೈ ಕಾರ್ಯಕರ್ತರು ಹಾಗೂ ಅಂಬರೀಷ್ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.ಈ ಬಗ್ಗೆ ಮಿತ್ರ ಪಕ್ಷಗಳು ಚಕಾರವೆತ್ತಿಲ್ಲ.

ಈ ನಡುವೆಯೇ ಬಿಜೆಪಿ ಮಂಡ್ಯ ರಾಜಕಾರಣದಲ್ಲಿ ದೋಸ್ತಿಗಳಿಗೆ ಖೆಡ್ಡ ತೋಡಿಸಲು ಸಜ್ಜಾಗಿದೆ.2019ರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮಂಡ್ಯದ ಬಿಜೆಪಿ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಕಮಲ ಪಾಳಯದಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.

ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಸುಮಲತಾ ಅವರ ಬಳಿ ಮಾತನಾಡುವಂತೆ ಮಾಜಿ ಡಿಸಿಎಂ ಆರ್.ಅಶೋಕ್ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಳಿ ಚರ್ಚಿಸಿದ್ದಾರೆ.

ಒಂದು ವೇಳೆ ಸುಮಲತಾ ಬಿಜೆಪಿಯಿಂದ ಕಣಕ್ಕಿಳಿಯಲು ಒಪ್ಪಿದ್ರೆ ಬಿಜೆಪಿಯಿಂದ ಟಿಕೆಟ್ ನೀಡಲು ರಾಜ್ಯಾಧ್ಯಕ್ಷರು ಸಮ್ಮಿತಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಮಂಡ್ಯ ಲೋಕಸಭೆ ಕ್ಷೇತ್ರವನ್ನು ಮೈತ್ರಿಪಕ್ಷ ಕಾಂಗ್ರೆಸ್‍ಗೆ ಬಿಟ್ಟು ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದರೆ.ಇತ್ತ ಕಾಂಗ್ರೆಸ್ ಮಾಜಿ ನಾಯಕ ಎಂ. ಎಚ್.ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಸಕ್ರಿಯ ರಾಜಕಾರಣಕ್ಕೆ ಬರುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಹೇಳಿರುವುದು ಬಿಜೆಪಿ ಆಸೆಗೆ ತಣ್ಣೀರು ಎರೆಚುವಂತೆ ಮಾಡಿದೆ.

ಮೂಲಗಳ ಪ್ರಕಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿಶ್ ಷಾ ಅವರೇ ಸುಮಲತಾ ಅಂಬರೀಶ್ ಅವರನ್ನು ಪಕ್ಷಕ್ಕೆ ಕರೆತರಲು ವಿಶೇಷ ಮುತವರ್ಜಿ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ವೇಳೆ ಸುಮಲತಾ ಬಿಜೆಪಿಗೆ ಸೇರ್ಪಡೆಯಾದರೆ, ಅದರಿಂದ ಮೈಸೂರು ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸಲು ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.

ರಾಜಕೀಯ ಪಕ್ಷ ಸೇರ್ಪಡೆ ಕುರಿತಂತೆ ಇದೊಂದು ವಿಭಿನ್ನ ಸನ್ನಿವೇಶ. ಮಂಡ್ಯ ಜನತೆ ಅಂಬರೀಷ್ ಅವರಿಗೆ ಎಷ್ಟು ಪ್ರೀತಿ ತೋರಿಸಿದ್ದಾರೆ ಎಂದು ಗೊತ್ತು. ಅದು ನನಗೆ ಕೂಡ ಖುಷಿ ಕೊಟ್ಟಿದೆ.ಮಂಡ್ಯ ಜನತೆಗೆ ಅಂಬರೀಷ್ ಅವರನ್ನು ಕಳೆದುಕೊಂಡ ನೋವು ಇದೆ.ಇದೀಗ ಅವರ ಕೈ ಬಿಡದಂತೆ ನನ್ನನ್ನು ಕೇಳಿಕೊಳ್ಳುತ್ತಿದ್ದಾರೆ.ಅಂಬರೀಷ್ ಅವರಿಗೆ ನೀಡಿದ ಪ್ರೀತಿಯನ್ನೇ ನಮ್ಮ ಕುಟುಂಬಕ್ಕೂ ನೀಡುತ್ತಿದ್ದಾರೆ.ಮಂಡ್ಯದ ಜನತೆ ಭಾವನಾ ಜೀವಿಗಳಾಗಿದ್ದು ಕಳೆದ 20-25 ವರ್ಷಗಳಿಂದ ಅದೇ ಭಾವನೆಗಳನ್ನು ನಾವು ಕೂಡ ಆ ಜಿಲ್ಲೆಯ ಜೊತೆ ಇರಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸುವ ಕುರಿತು ನಾನು ಇನ್ನೂ ನಿರ್ಧಾರ ಮಾಡಿಲ್ಲ, ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ಈ ಕುರಿತು ನಿರ್ಧಾರ ಕೈಗೊಳ್ಳಬೇಕಿದೆ ಎನ್ನುವ ಮೂಲಕ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿರುವುದರಿಂದ ಬಿಜೆಪಿ ಅವರನ್ನು ಪಕ್ಷಕ್ಕೆ ಕರೆತರುವ ಆಸೆಯನ್ನು ಇನ್ನು ಜೀವಂತವಾಗಿಟ್ಟುಕೊಂಡಿದೆ.

ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಗೆ ಬಳಸುವ ತಂತ್ರ ಮತ್ತು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಚರ್ಚಿಸುವಾಗ ಮಂಡ್ಯದಿಂದ ಸುಮಲತಾ ಅವರನ್ನು ಕಣಕ್ಕಿಳಿಸಿದರೆ ಹೇಗೆ ಎಂಬ ಮಾತು ಬಿಜೆಪಿ ನಾಯಕರ ಸಭೆಯಲ್ಲಿ ಚರ್ಚೆಗೆ ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ