ಬಜೆಟ್ ಮಂಡನೆಗೂ ಮುನ್ನ ಮಾಹಿತಿ ಸೋರಿಕೆ: ಕಾಂಗ್ರೆಸ್ ಆರೋಪ

ನವದೆಹಲಿ,ಫೆ.1- ಬಜೆಟ್ ಮಂಡನೆಗೂ ಮುನ್ನ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗೇ ಪ್ರತಿಗಳನ್ನು ಸೋರಿಕೆ ಮಾಡಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಈ ಸಂಬಂಧ ಕಾಂಗ್ರೆಸ್‍ನ ಹಿರಿಯ ಮುಖಂಡ ಮನೀಶ್ ತಿವಾರಿ ಟ್ವಿಟರ್‍ನಲ್ಲಿ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರ ಮಂಡನೆಗೂ ಮುನ್ನವೇ ಮಾಧ್ಯಮಗಳಿಗೆ ಮಾಹಿತಿಯನ್ನು ಸೋರಿಕೆ ಮಾಡಿದೆ ಎಂದು ದೂರಿದ್ದಾರೆ.

ಜೊತೆಗೆ ತಮ್ಮ ಟ್ವಿಟರ್‍ನಲ್ಲಿ ಸೋರಿಕೆಯಾಗಿರುವ ಅಂಶಗಳನ್ನು ಅಪ್‍ಲೋಡ್ ಮಾಡಿದ್ದಾರೆ. ಇದು ಸರ್ಕಾರ ದುರುದ್ದೇಶ ಪೂರ್ವಕವಾಗಿಯೇ ಮಾಡಿರುವ ಹುನ್ನಾರ ಎಂದು ಆರೋಪಿಸಿದ್ದಾರೆ.

ಬಜೆಟ್ ಮಂಡನೆಗೂ ಮುನ್ನವೇ ಸೋರಿಕೆಯಾದರೆ ಅದಕ್ಕೆ ಪಾವಿತ್ರತೆ ಇರುತ್ತದೆಯೇ? ಸರ್ಕಾರ ಪ್ರಚಾರ ಗಿಟ್ಟಿಸಿಕೊಳ್ಳಲು ಮಾಧ್ಯಮಗಳಿಗೆ ಸೋರಿಕೆ ಮಾಡಿದೆ. ರೈತರ ಖಾತೆಗಳಿಗೆ 4000 ಹಣ ಜಮೆ ಮಾಡುವುದು, ಎರಡು ಲಕ್ಷದವರೆಗಿನ ರೈತರ ಸಾಲಮನ್ನಾ ಸೇರಿದಂತೆ ಪ್ರಮುಖ ಮಾಹಿತಿಗಳು ಹೇಗೆ ಸೋರಿಕೆಯಾಗಿವೆ ಎಂದು ಪ್ರಶ್ನೆ ಮಾಡಿದೆ.

ಮನೀಶ್ ತಿವಾರಿ ಅವರ ಆರೋಪಕ್ಕೆ ದನಿಗೂಡಿಸಿರುವ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸರ್ಕಾರ ಬಜೆಟ್ ಮಂಡನೆಗೂ ಮುನ್ನ ಎರಡು ಗಂಟೆ ಮುಂಚಿತವಾಗಿಯೇ ಪ್ರಮುಖ ಮಾಹಿತಿಗಳನ್ನು ಮಾಧ್ಯಮಗಳಿಗೆ ಸೋರಿಕೆಯಾಗುವಂತೆ ನೋಡಿಕೊಂಡಿದೆ.
ಲೋಕಸಭೆಯಲ್ಲಿ ಯಾವ ಪುರುಷಾರ್ಥಕ್ಕೆ ಹಣಕಾಸು ಖಾತೆ ಹೊಂದಿರುವ ಪಿಯೂಶ್ ಗೋಯಲ್ ಮಧ್ಯಂತರ ಬಜೆಟ್ ಮಂಡನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಹೊಸ ಸಂಪ್ರದಾಯವನ್ನು ಹುಟ್ಟುಹಾಕಿ ಬಜೆಟ್ ಮಂಡಿಸುತ್ತಿರುವುದು ಈ ಸರ್ಕಾರದ ಸಾಧನೆ. ಈವರೆಗೂ ಯಾವ ಸರ್ಕಾರಗಳು ಬಜೆಟ್ ಸೋರಿಕೆಯಾಗದಂತೆ ಗೌಪ್ಯತೆ ಕಾಪಾಡಿಕೊಂಡು ಬಂದಿದ್ದವು. ಆದರೆ ಅದನ್ನು ಹಾಳು ಮಾಡಿದ ಕೀರ್ತಿ ಈ ಸರ್ಕಾರಕ್ಕೆ ಸಲ್ಲುತ್ತದೆ ಎಂದು ದೂರಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾದ ಪ್ರಿಯಾಂಕ ಚತುರ್ವೇದಿ ಕೂಡ ಟ್ವೀಟ್ ಮಾಡಿದ್ದು, ಬಜೆಟ್ ಮಂಡಿಸುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ