ನವದೆಹಲಿ, ಜ.31- ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ಮಧ್ಯಂತರ ನಿರ್ದೇಶಕರನ್ನಾಗಿ ಎಂ.ನಾಗೇಶ್ವರ ರಾವ್ ಅವರನ್ನು ನೇಮಕ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆಯಿಂದ ಸುಪ್ರೀಂಕೋರ್ಟ್ ನ್ಯಾಯಾಧೀಶ ಎನ್.ವಿ.ರಮಣ ಅವರು ಇಂದು ತಾವಾಗಿಯೇ ದೂರ ಉಳಿದಿದ್ದಾರೆ.
ಈ ಪ್ರಕರಣದ ವಿಚಾರಣೆಯಿಂದ ದೂರು ಸರಿದ ಸರ್ವೋಚ್ಚ ನ್ಯಾಯಾಲಯದ ಮೂರನೇ ನ್ಯಾಯಮೂರ್ತಿ ಇವರಾಗಿದ್ದಾರೆ. ಈ ಹಿಂದೆ ಇದೇ ಪ್ರಕರಣದ ವಿಚಾರಣೆಯಿಂದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ಮತ್ತು ನ್ಯಾಯಮೂರ್ತಿ ಎ.ಕೆ.ಸಿಕ್ರಿ ದೂರ ಉಳಿದಿದ್ದರು.
ಸಿಬಿಐ ಹಂಗಾಮಿ ಮುಖ್ಯಸ್ಥರಾದ ಎಂ.ನಾಗೇಶ್ವರ ರಾವ್ ಮತ್ತು ತಾವು ಒಂದೇ ರಾಜ್ಯದವರಾಗಿದ್ದು, ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ತಾವು ಪಾಲ್ಗೊಂಡಿದ್ದಾಗಿ ತಿಳಿಸಿ ವಿಚಾರಣೆಯಿಂದ ದೂರವಾಗಿರುವ ಕಾರಣಕ್ಕೆ ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣವನ್ನು ಸೂಕ್ತ ಪೀಠದಿಂದ ವಿಚಾರಣೆ ನಡೆಸಲು ಅವರು ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವಿ ಮಾಡಿದ್ದಾರೆ.
ಸಿಬಿಐಗೆ ಮಧ್ಯಂತರ ನಿರ್ದೇಶಕರಾಗಿ ರಾವ್ ಅವರನ್ನು ನೇಮಕ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಕಾಮನ್ಕಾಸ್ ಎಂಬ ಎನ್ಜಿಒ ಸರ್ವೋನ್ನತ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.