ಜೈಪುರ, ಜ.31- ರಾಜಸ್ತಾನದ ರಾಮ್ಗಢ್ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಫಿಯಾ ಝುಬೈರ್ 12,228 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿಯ ಪ್ರತಿಸ್ಪರ್ಧಿ ಶುಕ್ವಂತ್ ಸಿಂಗ್ ಪರಾಭವಗೊಂಡಿದ್ದಾರೆ. ಬಿಎಸ್ಪಿ ಅಭ್ಯರ್ಥಿ ಮತ್ತು ಮಾಜಿ ಶಾಸಕ ಜಗತ್ ಸಿಂಗ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಜನವರಿ 28ರಂದು ನಡೆದ ರಾಮ್ಗಢ್ ವಿಧಾನಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಉಮೇದುವಾರರು ಸ್ಪರ್ಧಿಸಿದ್ದರು.
ಡಿಸೆಂಬರ್ 7ರಂದು ರಾಜಸ್ತಾನದಲ್ಲಿ ನಡೆದ ವಿಧಾನಸಭೆ ಚುನಾವಣೆಗೂ ಮುನ್ನವೇ ಬಿಎಸ್ಪಿ ಅಭ್ಯರ್ಥಿ ಮೃತಪಟ್ಟ ಕಾರಣ ಈ ಕ್ಷೇತ್ರದಲ್ಲಿ ಮತದಾನ ನಡೆದಿರಲಿಲ್ಲ.