ಚಂದಾ ಕೊಚ್ಚಾರ್ ರನ್ನು ಹುದ್ದೆಯಿಂದ ವಜಾಗೊಳಿಸಿದ ಐಸಿಐಸಿಐ ಬ್ಯಾಂಕ್‌

ನವದೆಹಲಿ:ವಿಡಿಯೊಕಾನ್‌ ಸಂಸ್ಥೆಗೆ ಅಕ್ರಮವಾಗಿ ಸಾಲ ನೀಡಿದ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್‌ ಮಾಜಿ ಸಿಇಒ ಚಂದಾ ಕೊಚ್ಚಾರ್‌ ಅವರು ಬ್ಯಾಂಕ್‌ನ ನೀತಿಗಳನ್ನು ಉಲ್ಲಂಘಿಸಿದ್ದಾರೆ ಎಂದು ತನಿಖಾ ಸಮಿತಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ ಚಂದಾ ಕೊಚ್ಚಾರ್‌ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ.

ನಿವೃತ್ತ ನ್ಯಾಯಮೂರ್ತಿ ಬಿ.ಎನ್‌ ಶ್ರೀಕೃಷ್ಣ ನೇತೃತ್ವದ ಸಮಿತಿ ತನ್ನ ತನಿಖೆಯನ್ನು ಮುಕ್ತಾಯಗೊಳಿಸಿದ್ದು, ವರದಿಯನ್ನು ಸಲ್ಲಿಸಿತು. ಇದಾದ ನಂತರ ಐಸಿಐಸಿಐ ಬ್ಯಾಂಕ್‌ನ ಆಡಳಿತ ಮಂಡಳಿಯು ಚಂದಾ ಕೊಚ್ಚಾರ್‌ ರಾಜೀನಾಮೆಯನ್ನು ‘ವಜಾ’ ಎಂದು ಪರಿಗಣಿಸಿದೆ. ಹಾಗೂ ಬ್ಯಾಂಕಿನ ನಿಯಮಾವಳಿಗೆ ಅನ್ವಯಿಸಿ ವೇತನ ಮತ್ತು ಬೋನಸ್‌ ಬಾಕಿ ಪಾವತಿಯನ್ನು ಸ್ಥಗಿತಗೊಳಿಸಿದೆ.

ವಿಡಿಯೊಕಾನ್‌ಗೆ ಸಾಲ ನೀಡಿದ ಪ್ರಕರಣದಲ್ಲಿ ಹಿತಾಸಕ್ತಿ ಸಂಘರ್ಷ ಇರುವುದನ್ನು ಕೊಚ್ಚಾರ್‌ ಅವರು ಸ್ವಯಂಪ್ರೇರಿತರಾಗಿ ಬ್ಯಾಂಕ್‌ಗೆ ಬಹಿರಂಗಪಡಿಸದೆ, ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದು ಸಮಿತಿ ಹೇಳಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಚಂದಾ ಕೊಚ್ಚಾರ್, ಪ್ರಕರಣಕ್ಕೆ ಸಂಬಂಧಿಸಿ ಸಮಿತಿಯ ನಿರ್ಧಾರದಿಂದ ನನಗೆ ದಿಗ್ಭ್ರಮೆಯಾಗಿದೆ. ತೀವ್ರ ನಿರಾಶೆಯಾಗಿದೆ. ವರದಿಯ ಪ್ರತಿಯನ್ನೂ ನನಗೆ ಕೊಟ್ಟಿಲ್ಲ. ಬ್ಯಾಂಕಿನಲ್ಲಿ ಸಾಲ ವಿತರಣೆಯ ಯಾವುದೇ ನಿರ್ಧಾರ ಏಕಪಕ್ಷೀಯವಾಗಿ ನಡೆದಿಲ್ಲ. ಐಸಿಐಸಿಐ ಸಂಘಟಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಹಲವಾರು ವೃತ್ತಿಪರರೂ ಭಾಗವಹಿಸುತ್ತಾರೆ. ಹಿತಾಸಕ್ತಿ ಸಂಘರ್ಷವನ್ನು ತಪ್ಪಿಸುವುದಕ್ಕಾಗಿಯೇ ಇಂಥ ವ್ಯವಸ್ಥೆ ಬ್ಯಾಂಕ್‌ನಲ್ಲಿದೆ. ಹೀಗಿರುವಾಗ ಸಮಿತಿಯ ನಿಲುವು ನಿರಾಶಾದಾಯಕವಾಗಿದೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ