
ನವದೆಹಲಿ, ಜ.31- ಸಂಸತ್ತಿನ ಬಜೆಟ್ ಅಧಿವೇಶನವನ್ನು ಪೂರಕ ಚರ್ಚೆಗಳಿಗಾಗಿ ಸದುಪಯೋಗ ಮಾಡಿಕೊಳ್ಳುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲ ಪಕ್ಷಗಳಿಗೆ ಸಲಹೆ ಮಾಡಿದ್ದಾರೆ.
ಪಾರ್ಲಿಮೆಂಟ್ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದ ಕಲಾಪಗಳು ಸುಗಮವಾಗಿ ನಡೆಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್(ಸರ್ವರ ಬೆಂಬಲ ಸರ್ವರ ಅಭಿವೃದ್ದಿ) ನಮ್ಮ ಮಂತ್ರ. ಇದೇ ಸ್ಪೂರ್ತಿಯನ್ನು ಸದನದಲ್ಲಿ ನಾನು ನೋಡಲು ಬಯಸುತ್ತೇನೆ. ಎಲ್ಲ ವಿಷಯಗಳ ಬಗ್ಗೆ ಚರ್ಚೆಯಾಗಬೇಕು ಎಂದು ಮೋದಿ ಹೇಳಿದರು.
ದೇಶದ ಎಲ್ಲ ನಾಗರಿಕರು ಸಂಸತ್ ಕಲಾಪವನ್ನು ಗಮನಿಸುತ್ತಾರೆ. ಅವರ ಹಿತಾಸಕ್ತಿಗಳ ಬಗ್ಗೆ ಚರ್ಚೆಯಾಗದಿದ್ದರೆ, ನಮ್ಮ ವಿರುದ್ಧ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗುತ್ತದೆ.
ಜನರ ಹಿತಾಸಕ್ತಿ ಮತ್ತು ಹಿತದೃಷ್ಟಿಯಿಂದ ಬಜೆಟ್ ಅಧಿವೇಶನವನ್ನು ಪೂರಕ ಚರ್ಚೆಗಳಿಗಾಗಿ ಎಲ್ಲ ಪಕ್ಷಗಳು ಸದುಪಯೋಗ ಮಾಡಿಕೊಳ್ಳಬೇಕೆಂದು ಮೋದಿ ಸಲಹೆ ನೀಡಿದರು.
ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ನಾಳೆ ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಕೊನೆಯ ಬಜೆಟ್ ಮಂಡನೆಯಾಗಲಿದೆ.