ನವದೆಹಲಿ,ಜ.30- ಏನಾದರೂ ಮಾಡಿ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ತಂತ್ರ-ಪ್ರತಿತಂತ್ರ ಜತೆ ಜತೆಗೆ ಪಕ್ಷದಲ್ಲಿ ನಾನಾ ಬದಲಾವಣೆಗೆ ಚಿಂತನೆ ನಡೆಸಿದೆ.
ಈ ಬಾರಿ ಅತಿ ಹೆಚ್ಚು ಸೀಟ್ ಗೆಲ್ಲಬೇಕು ಎಂಬ ಲೆಕ್ಕಾಚಾರದಲ್ಲಿ ಹಾಲಿ ಸಂಸದರ ರಿಪೋರ್ಟ್ ಸಿದ್ಧಪಡಿಸುತ್ತಿದ್ದು, ಇದರ ಪ್ರಕಾರ ಕೆಲವರಿಗೆ ಟಿಕೆಟ್ ಗಿಟ್ಟಿಸೋದಕ್ಕೆ ಸಾಧ್ಯವಾಗದೆಯೂ ಇರಬಹುದು. ಯಾಕೆಂದರೆ , ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಯಾರಿಗೆ ಟಿಕೆಟ್ ನೀಡಿದರೆ ಗೆಲ್ಲಬಹುದು ಎಂಬುದರ ಕುರಿತು ಚಿಂತಕರ ಛಾವಡಿ ಚರ್ಚಿಸುತ್ತಿವೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಕುದುರೆಗಳಿಗೆ ಮಾತ್ರ ಬಿಜೆಪಿ ಮಣೆ ಹಾಕಲಿದೆಯಂತೆ. ಅದಕ್ಕಾಗಿ ಈಗಾಗ್ಲೇ ಹಾಲಿ ಸಂಸದರ ರಿಪೋರ್ಟ್ ಕಾರ್ಡ್, ದಿಲ್ಲಿ ಪಾರ್ಟಿ ಕಚೇರಿಯಲ್ಲಿ ಸಿದ್ಧವಾಗುತ್ತಿದೆ. ಯಾರ್ಯಾರ ಅಂಕಗಳೆಷ್ಟು, ಯಾರ ಹಣೆಬರಹ ಏನಾಗುತ್ತೆ ಅನ್ನೋದೆಲ್ಲ ಪಕ್ಷದ ಥಿಂಕ್ ಟ್ಯಾಂಕ್ ಕೈಯಲ್ಲಿದೆಯಂತೆ. ಅದೇ ಚಿಂತಕರ ಛಾವಡಿಯೇ ಯಾರಿಗೆ ಟಿಕೆಟ್ ನೀಡಬೇಕು, ಯಾರಿಗೆ ನೀಡಬಾರದು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎನ್ನುತ್ತಿವೆ ಬಿಜೆಪಿ ಮೂಲಗಳು.
ಬಿಜೆಪಿ ಸಂಸದರ ರಿಪೋರ್ಟ್ ಕಾರ್ಡ್ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತಿದೆಯಂತೆ. ಸಂಸದರು ಪ್ರತಿನಿಧಿಸಿರೋ ಕ್ಷೇತ್ರದಲ್ಲಿ ಅವರ ಜನಪ್ರಿಯತೆ, ಅಭಿವೃದ್ಧಿ ಕಾರ್ಯ ಹಾಗೂ ಇತರೆ ಅಭ್ಯರ್ಥಿಗಳಿಗೆ ಹೋಲಿಸಿದರೆ ಜನಸಾಮಾನ್ಯರೊಂದಿಗೆ ಎಷ್ಟು ಹತ್ತಿರವಾಗಿದ್ದಾರೆ ಎಂಬ ಮಾನದಂಡಗಳನ್ನು ಇರಿಸಿಕೊಂಡೇ ರಿಪೋರ್ಟ್ಕಾರ್ಡ್ ತಯಾರು ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಈಗಾಗಲೇ 2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ, ಎಲ್ಲ ಬಿಜೆಪಿ ಸಂಸದರಿಗೂ ರಿಪೋರ್ಟ್ ಕಾರ್ಡ್ ಕಳಿಸುವಂತೆ ಕೇಳಿದ್ದರು. ತಮ್ಮ ತಮ್ಮ ಕ್ಷೇತ್ರದಲ್ಲಿ ಸಂಸದರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ಮಾಹಿತಿ ಇರಬೇಕೆಂದು ಸೂಚನೆ ಕೂಡ ನೀಡಿದ್ರು. ಬೇರೆ ಪಕ್ಷಗಳಿಗೆ ಹೋಲಿಸಿದ್ರೇ ಬಿಜೆಪಿ ಮಾತ್ರ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಈ ಸಾರಿ ಲೋಕಸಭಾ ಕದನವನ್ನು ಎದರಿಸಲಿರುವುದು ನಿಜ ಎಂದು ಮೂಲಗಳು ತಿಳಿಸಿವೆ.