ಲೋಕಸಭಾ ಚುನಾವಣೆ ವೇಳೆ ಉಗ್ರರ ದಾಳಿ ಭೀತಿ

ವಾಷಿಂಗ್ಟನ್ ,ಜ.30- ಭಾರತ ಹಾಗೂ ಆಫ್ಘಾನಿಸ್ಥಾನದ ಮೇಲೆ ಮುಂದಿನ ದಿನಗಳಲ್ಲಿ ಸಾಕಷ್ಟು ಉಗ್ರರ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಎಚ್ಚರಿಸಿದೆ.

ದಕ್ಷಿಣ ಏಷ್ಯಾದ ದೇಶಗಳ ಮೇಲೆ ಉಗ್ರರ ಕರಿನೆರಳು ಬಿದ್ದಿದ್ದು, ಭಾರತದಲ್ಲಿ ನಡೆಯುವ ಲೋಕಸಭಾ ಚುನಾವಣೆ ವೇಳೆ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದ್ದು, ಪಾಕಿಸ್ತಾನ ಪೋಷಿಸುತ್ತಿರುವ ತಾಲಿಬಾನ್ ಉಗ್ರಸಂಘಟನೆ ದಾಳಿಗೆ ಹುನ್ನಾರ ನಡೆಸುತ್ತಿದೆ ಎಂದು ಹೇಳಿದೆ.

ಆಫ್ಘಾನಿಸ್ತಾನದಲ್ಲಿ ಜುಲೈ ಮಧ್ಯಭಾಗದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಹೀಗಾಗಿ ಭಾರತ ಹಾಗೂ ಆಫ್ಘಾನಿಸ್ತಾನ ಉಗ್ರರ ಬಹುಮುಖ್ಯ ಟಾರ್ಗೆಟ್ ಎನ್ನಲಾಗಿದೆ.

ಪಾಕಿಸ್ತಾನ ಉಗ್ರಸಂಘಟನೆಯನ್ನು ತನ್ನ ಶತ್ರುರಾಷ್ಟ್ರದ ಶಕ್ತಿ ಕುಗ್ಗಿಸಲು ಬಳಿಸಿಕೊಳ್ಳುತ್ತಿದೆ. ಪಾಕ್ ಪೋಷಣೆಯಲ್ಲಿ ಉಗ್ರರು ಸುಲಭವಾಗಿ ಯೋಜನೆಯನ್ನು ಕಾರ್ಯಗತಗೊಳಿಸುತ್ತಿವೆ. ಪಾಕಿಸ್ತಾನ ಬೆಂಬಲಿತ ಉಗ್ರರಿಂದ ಭಾರತದ ಮೇಲೆ ನಡೆಯುತ್ತಿರುವ ದಾಳಿ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದೆ.

ಪಾಕಿಸ್ತಾನ ಉಗ್ರರ ಸ್ವರ್ಗ ಎಂದು ಭಾರತ ಮೊದಲಿನಿಂದಲೂ ಹೇಳುತ್ತಲೇ ಬರುತ್ತಿದೆ. ಅಮೆರಿಕ ಕೂಡ ಇದನ್ನು ಪುನರುಚ್ಛರಿಸಿದೆ. ಭಯೋತ್ಪಾದನೆ ನಿಗ್ರಹಕ್ಕೆ ಪಾಕಿಸ್ತಾನ ಹೆಚ್ಚು ಪ್ರಯತ್ನ ಮಾಡುತ್ತಿಲ್ಲ. ಕೆಲ ಉಗ್ರ ಸಂಘಟನೆಗಳನ್ನು ನೀತಿ ರಚನೆಗೆ ಬಳಕೆ ಮಾಡಿಕೊಳ್ಳುತ್ತಿದೆ. ಹಾಗಾಗಿ ಉಗ್ರರು ಪಾಕಿಸ್ತಾನದಲ್ಲಿ ಹಾಯಾಗಿದ್ದಾರೆ. ಅಲ್ಲಿಯೇ ಇದ್ದುಕೊಂಡು ಭಾರತ, ಆಫ್ಘಾನಿಸ್ತಾನದ ಮೇಲೆ ದಾಳಿ ನಡೆಸುವ ಯೋಜನೆ ಹಾಕಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಪಾಕಿಸ್ತಾನ ಉಗ್ರ ಸಂಘಟನೆಗೆ ಬೆಂಬಲ ನೀಡುತ್ತಿರುವುದು ಅಮೆರಿಕಕ್ಕೂ ಸಂಕಟ ತಂದೊಡ್ಡುವ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಗುಪ್ತಚರ ಇಲಾಖೆ ಅಧಿಕಾರಿಗಳು, ಈ ಉಗ್ರರು ಕೇವಲ ಭಾರತ-ಪಾಕಿಸ್ತಾನ ಮಾತ್ರವಲ್ಲದೆ ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜುಲೈನಲ್ಲಿ ಆಫ್ಘಾನಿಸ್ತಾನದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ವೇಳೆ ತಾಲಿಬಾನ್ ಉಗ್ರ ಸಂಘಟನೆ ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡುವ ಆಲೋಚನೆ ಇಟ್ಟುಕೊಂಡಿದೆಯಂತೆ. ಚುನಾವಣೆ ವೇಳೆ ಪ್ರಮುಖ ನಾಯಕರಿಗೆ ಹೆಚ್ಚಿನ ರಕ್ಷಣೆ ನೀಡಲಾಗುತ್ತದೆ. ಆದಾಗ್ಯೂ, ಉಗ್ರರು ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲು ಸಂಚು ರೂಪಿಸಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.

ದಕ್ಷಿಣ ಏಷ್ಯಾದ ದೇಶಗಳ ಮೇಲೆ ಉಗ್ರರ ಕರಿನೆರಳು ಬಿದ್ದಿದ್ದು, ಭಾರತದಲ್ಲಿ ನಡೆಯುವ ಲೋಕಸಭಾ ಚುನಾವಣೆ ವೇಳೆ ಟೆರರ್ ಅಟ್ಯಾಕ್ ಸಾಧ್ಯತೆಯನ್ನು ಗುಪ್ತಚರ ಇಲಾಖೆ ವ್ಯಕ್ತಪಡಿಸಿದೆ. ಪಾಕಿಸ್ತಾನ ಪೋಷಿಸುತ್ತಿರುವ ತಾಲಿಬಾನ್ ಉಗ್ರಸಂಘಟನೆ ದಾಳಿಗೆ ಹುನ್ನಾರ ನಡೆಸುತ್ತಿದೆ ಎಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ