ಬೆಂಗಳೂರು, ಜ.30- ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳ ಮುಖಂಡರಲ್ಲೇ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಆಪ್ತರೊಂದಿಗೆ ರಹಸ್ಯ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಯಡಿಯೂರಪ್ಪನವರು ಪಕ್ಷದ ಮುಖಂಡರಾದ ವಿ.ಸೋಮಣ್ಣ, ಆರ್.ಅಶೋಕ್, ಅರವಿಂದ ಲಿಂಬಾವಳಿ, ವಿಧಾನಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಕೆಲವೇ ಕೆಲವು ಆಯ್ದ ಮುಖಂಡರೊಂದಿಗೆ ರಹಸ್ಯ ಸಮಾಲೋಚನೆ ಸಭೆ ನಡೆಸಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವೆ ಪರಸ್ಪರ ಟೀಕೆ, ಟಿಪ್ಪಣಿಗಳು ನಡೆಯುತ್ತಿರುವಾಗಲೇ ಬಿಎಸ್ವೈ ಗುಪ್ತ ಸಮಾಲೋಚನೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮುಂಬರುವ ಲೋಕಸಭೆ ಚುನಾವಣೆ ಕೈಗೊಳ್ಳಬೇಕಾಗಿರುವ ಕಾರ್ಯಗಳು ಹಾಗೂ ಬಜೆಟ್ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರೂಪಿಸಬೇಕಾದ ರಣತಂತ್ರಗಳ ಬಗ್ಗೆ ಚರ್ಚಿಸಲು ಮುಖಂಡರ ಜತೆ ಸಭೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಇದಕ್ಕೆ ಬೇರೆಯದೇ ಆದ ಕಾರಣವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ನಿಂದ ಬಹುತೇಕ ದೂರ ಸರಿದಿರುವ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ, ಡಾ.ಉಮೇಶ್ ಜಾಧವ್, ಪ್ರತಾಪ್ಗೌಡ ಪಾಟೀಲ್, ಜೆ.ಗಣೇಶ್ ಸೇರಿದಂತೆ ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಮುಳಬಾಗಿಲಿನ ಎಚ್.ನಾಗೇಶ್ ಅವರನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ಯುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಸದ್ಯಕ್ಕೆ ನಾಲ್ವರು ಶಾಸಕರು ಮಾತ್ರ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದು, ಇವರ ಜತೆಗೆ ಇನ್ನೂ ಕೆಲ ಅತೃಪ್ತ ಕಾಂಗ್ರೆಸ್ ಶಾಸಕರು ಕೈ ಜೋಡಿಸಲಿದ್ದು, ಫೆ.8ರಂದು ಮಂಡನೆಯಾಗಲಿರುವ ಬಜೆಟ್ಗೂ ಮುನ್ನವೇ ಅತೃಪ್ತರೆಲ್ಲರನ್ನೂ ಹೊರ ರಾಜ್ಯಕ್ಕೆ ಕರೆದೊಯ್ಯುವುದರ ಬಗ್ಗೆ ಮುಖಂಡರಿಂದ ಬಿಎಸ್ವೈ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಇದರ ಜತೆಗೆ ಬಿಜೆಪಿಯಲ್ಲೇ ಇರುವ ಮೂರ್ನಾಲ್ಕು ಶಾಸಕರು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಜತೆ ಸಂಪರ್ಕದಲ್ಲಿರುವುದರಿಂದ ಈ ಶಾಸಕರನ್ನೂ ಪಕ್ಷ ಬಿಟ್ಟು ಹೋಗದಂತೆ ರೆಸಾರ್ಟ್ಗೆ ಕರೆದೊಯ್ಯುವ ಬಗ್ಗೆ ಚಿಂತನೆ ನಡೆದಿದೆ.
ಒಬ್ಬೊಬ್ಬ ಶಾಸಕರ ಸಂಖ್ಯೆಯೂ ಈಗಿನ ಪರಿಸ್ಥಿತಿಯಲ್ಲಿ ನಿರ್ಣಾಯಕವಾಗಿರುವುದರಿಂದ ಬಿಜೆಪಿಯ ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗದಂತೆ ಈಗಾಗಲೇ ಮನವರಿಕೆ ಮಾಡುವ ಕಸರತ್ತಿಗೆ ಕೈ ಹಾಕಲಾಗಿದೆ.
ಆದರೂ, ಕೆಲವು ಶಾಸಕರ ನಡವಳಿಕೆಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿರುವುದರಿಂದ ಅಂತಹವರನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ನಾಳೆ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ನಂತರವೇ ಶಾಸಕರ ರೆಸಾರ್ಟ್ ವಾಸ್ತವ್ಯದ ಬಗ್ಗೆ ಸ್ಪಷ್ಟ ಚಿತ್ರ ಸಿಗಲಿದೆ.