ನವದೆಹಲಿ, ಜ.30-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ನಿಯಂತ್ರಣ) ಕಾಯ್ದೆ, 2018ಕ್ಕೆ ಮಾಡಲಾಗಿರುವ ತಿದ್ದುಪಡಿಗಳಿಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಇಂದು ಮತ್ತೊಮ್ಮೆ ನಿರಾಕರಿಸಿದೆ. ಇದಕ್ಕೆ ಸಂಬಂಧಪಟ್ಟ ಎಲ್ಲ ಅರ್ಜಿಗಳು ಮತ್ತು ವಿಷಯಗಳ ಬಗ್ಗೆ ಫೆ.19ರಂದು ವಿಚಾರಣೆ ನಡೆಸುವುದಾಗಿ ಸರ್ವೋನ್ನತ ನ್ಯಾಯಾಲಯ ತಿಳಿಸಿದೆ.
ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಪ್ರಶ್ನಿಸಿ ಅರ್ಜಿದಾರರೊಬ್ಬರು ಮನವಿ ಸಲ್ಲಿಸಿ ಇದಕ್ಕೆ ಕೂಡಲೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ವಿಕಾಸ್ ಸಿಂಗ್ ಕೋರ್ಟ್‍ಗೆ ಹಾಜರಾಗಿ ಈ ವಿಷಯವನ್ನು ಪ್ರಸ್ತಾಪಿಸಿದರು.
ನ್ಯಾಯಮೂರ್ತಿ ಉದಯ್ ಯು. ಲಲಿತ್ ನೇತೃತ್ವದ ಪೀಠವು ತಡೆ ನೀಡಲು ನಿರಾಕರಿಸಿತು. ಅಲ್ಲದೇ ಇದಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳ ಬಗ್ಗೆ ಮುಂದಿನ ತಿಂಗಳು 19ರಂದು ಕೂಲಂಕಷ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಎಸ್‍ಸಿ/ಎಸ್‍ಟಿ ಕಾಯ್ದೆ, 2018ಕ್ಕೆ ತಿದ್ದುಪಡಿಗಳನ್ನು ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳು ಹಾಗೂ ಕೇಂದ್ರ ಸರ್ಕಾರದ ಪರಾಮರ್ಶೆ ಮನವಿಯನ್ನು ಸೂಕ್ತ ಪೀಠದ ಮುಂದೆ ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಜನವರಿ 25ರಂದು ತಿಳಿಸಿತ್ತು.
ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡದಿರುವ ನಿಯಮವನ್ನು ಮತ್ತೆ ಸೇರ್ಪಡೆ ಮಾಡಲಾದ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ನಿಯಂತ್ರಣ) ಕಾಯ್ದೆ, 2018ರ ತಿದ್ದುಪಡಿಗಳಿಗೆ ತಡೆ ನೀಡಲು ಈ ಹಿಂದೇಯು ಸಹ ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿತ್ತು.
ಎಸ್‍ಸಿ ಮತ್ತು ಎಸ್‍ಟಿ ಕಾನೂನು ಅಡಿ ಬಂಧನದ ವಿರುದ್ಧ ಕೆಲವು ರಕ್ಷಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶಕ್ಕೆ ಪ್ರತಿಯಾಗಿ ಕಳೆದ ವರ್ಷ ಆಗಸ್ಟ್ 9ರಂದು ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಲಾಗಿತ್ತು.
ಸರ್ಕಾರಿ ಉದ್ಯೋಗಿಗಳು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಈ ಕಾಯ್ದೆಯನ್ನು ವ್ಯಾಪಕವಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಸಂಗತಿಯನ್ನು ಮನಗಂಡ ಸುಪ್ರೀಂಕೋರ್ಟ್ ಮಾರ್ಚ್ 20, 2018ರಲ್ಲಿ ಈ ಕಾನೂನಿನ ಅಡಿ ದಾಖಲಾಗುವ ಯಾವುದೇ ದೂರಿನ ಮೇಲೆ ತಕ್ಷಣ ಬಂಧಿಸದಂತೆ ತಿಳಿಸಿತ್ತು.