ರಾಜಧಾನಿಯಲ್ಲಿ ಬಡ ತಾಯಂದಿರ ಕಣ್ಣೀರು: ಮದ್ಯ ನಿಷೇಧಕ್ಕೆ ಆಗ್ರಹ; ವಿಧಾನಸೌಧ ಮುತ್ತಿಗೆ!

ಬೆಂಗಳೂರುಸಂಪೂರ್ಣ ಮದ್ಯ ನಿಷೇಧಿಸಿ, ನಮ್ಮ ಬದುಕು ಉಳಿಸಿ’ ಎಂಬ ಬಡ ತಾಯಂದಿರ ಕೂಗು ರಾಜಧಾನಿ ಮುಟ್ಟಿದೆ. ‘ಮದ್ಯ ನಿಷೇಧ ಆಂದೋಲನ’ ಸಂಘಟನೆಯ ನೇತೃತ್ವದಲ್ಲಿ ಇಂದು ಸಾವಿರಾರು ರೈತ ಮಹಿಳೆಯರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ಧಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿರುವ ಈ ಬಡ ಮಹಿಳೆಯರ ಹೋರಾಟಕ್ಕೆ ರೈತ ಮತ್ತು ಪ್ರಗತಿಪರ ಸಂಘಟನೆಗಳು ಬೆಂಬಲವಾಗಿ ನಿಂತಿವೆ. ಅಲ್ಲದೇ ಹಿರಿಯ ಸ್ವಾತಂತ್ರ ಸೇನಾನಿ ಹೆಚ್‌.ಎಸ್.ದೊರೆಸ್ವಾಮಿಯವರು ಕೂಡ ಈ ಹೋರಾಟದ ಬೆನ್ನಿಗೆ ನಿಂತಿದ್ದಾರೆ.

ಕಳೆದ ಹಲವು ವರ್ಷಗಳ ಹಿಂದೆಯೇ ಮದ್ಯ ನಿಷೇಧ ಆಂದೋಲನ ಶುರುವಾಗಿದೆ. ಹಿಂದಿನಿಂದಲೂ ಸಂಪೂರ್ಣ ಮದ್ಯ ನಿಷೇಧಕ್ಕೆ ಆಗ್ರಹಿಸಿ ಸಾವಿರಾರು ಮಹಿಳೆಯರು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಪ್ರಸ್ತುತ ಹೋರಾಟದ ಸ್ವರೂಪ ತೀವ್ರಗೊಂಡಿದೆ. ಹೀಗಾಗಿಯೇ ಪಾದಯಾತ್ರೆ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲು ಮಹಿಳೆಯರು ನಿರ್ಧರಿಸಿದ್ದಾರೆ. ಈ ಸಲುವಾಗಿಯೇ ಇದೇ ತಿಂಗಳು ಜನವರಿ.19 ರಂದು ಚಿತ್ರದುರ್ಗದಿಂದ ರಾಜಧಾನಿಗೆ ಪಾದಯಾತ್ರೆ ಬೆಳೆಸಿದ್ದಾರೆ. 11 ದಿನಗಳ ಪಾದಯಾತ್ರೆ ನಂತರ ಈಗ ಬೆಂಗಳೂರು ತಲುಪಿದ್ದು, ವಿಧಾನಸೌಧ ಮುತ್ತಿಗೆ ಸಿದ್ದತೆ ನಡೆಸಿಕೊಳ್ಳಲಾಗಿದೆ.

ಪೊಲೀಸ್​​ ಭದ್ರತೆ: ನಿನ್ನೆ ಸಂಜೆಯೇ ಈ ತಾಯಂದಿರ ದಂಡು ಬೆಂಗಳೂರು ತಲುಪಿದೆ. ಈಗಾಗಲೇ ಮಲೇಶ್ವರಂ ಆಟದ ಮೈದಾನದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ರಾತ್ರಿಯೆಲ್ಲಾ ಕೊರೆವ ಚಳಿಯನ್ನು ಲೆಕ್ಕಿಸದೇ  ಸಾವಿರಾರು ಮಹಿಳೆಯರು ತಮ್ಮ ಹಕ್ಕೋತ್ತಾಯಗಳನ್ನು ಮಂಡಿಸಲು ತಯಾರಿ ನಡೆಸಿಕೊಂಡಿದ್ದಾರೆ. ಇನ್ನು ವಿಧಾನಸೌಧದತ್ತ ಮಹಿಳೆಯರ ಮೆರವಣಿಗೆ ಹೊರಡಲಿದ್ದು, ದಾರಿ ಮಧ್ಯೆಯೇ ಸ್ವಾತಂತ್ರ್ಯ ಉದ್ಯಾನವನದ ಬಳಿ ತಡೆದು ನಿಲ್ಲಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಸರ್ಕಾರವೇ ಹಿರಿಯ ಪೊಲೀಸ್ ಅಧಿಕಾರಿಗಳು ಆದೇಶಿಸಿದ್ದಾರೆ. ಈಗಾಗಲೇ ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಠೋರ್ ನೇತೃತ್ವದಲ್ಲಿ 1 ಎಸಿಪಿ , 5 ಇನ್ಸ್ ಪೆಕ್ಟರ್ ಸೇರಿದಂತೆ 250 ಮಂದಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. 150 ಮಂದಿ ಮಹಿಳಾ ಸಿಬ್ಬಂದಿ ಭದ್ರತೆ ನಿಯೋಜಿಸಿದ್ದು, ಆನಂದ್ ರಾವ್ ಸರ್ಕಲ್ ಬಳಿಯೇ ಮಹಿಳೆಯರನ್ನ ತಡೆದು ಪ್ರೀಡಂ ಪಾರ್ಕ್ ಗೆ ಕರೆದೊಯ್ಯಲಿದ್ದಾರೆ ಎನ್ನಲಾಗಿದೆ.

ವ್ಯಾಪಾಕ ಬೆಂಬಲ: ಇನ್ನು ಮದ್ಯ ನಿಷೇಧಿಸುವಂತೆ ಹೋರಾಟ ನಡೆಸಿತ್ತಿರುವ ಮಹಿಳೆಯರಿಗೆ ವ್ಯಾಪಕ ಬೆಂಬಲ ಸಿಗುತ್ತಿದೆ. ಈಗಾಗಲೇ ಹಿರಿಯ ಸ್ವತಂತ್ರ್ಯ ಹೋರಾಟಗಾರ ಹೆಚ್‌.ಎಸ್.ದೊರೆಸ್ವಾಮಿ ಸೇರಿದಂತೆ ರೈತ, ಮಹಿಳಾ, ವಿದ್ಯಾರ್ಥಿ ಸೇರಿದಂತೆ ದಲಿತ ಸಂಘಟನೆಗಳು ಬೆಂಬಲ ಸೂಚಿಸಿವೆ. ಇನ್ನೊಂದೆಡೆ ಮುಖ್ಯಮಂತ್ರಿ ಮೇಲೆ ಒತ್ತಡ ತರಲು ಆಗಲೇ ಸಾಮಾಜಿಕ ಹೋರಾಟಗಾರರಾದ ಎಸ್.ಆರ್. ಹಿರೇಮಠ ಹಾಗೂ ಸಾಹಿತಿ ದೇವನೂರು ಮಹಾದೇವ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಮಹಿಳೆಯರ ಅಹವಾಲಿಗೆ ಸ್ಪಂದಿಸುವಂತೆ ಕೇಳಿಕೊಂಡಿದ್ದಾರೆ.

ಸಾವಿನ ದುರಂತ: ರಾಜ್ಯದ ಹಲವು ಜಿಲ್ಲೆಗಳ ಗ್ರಾಮೀಣ ಮಹಿಳೆಯರು ಚಿತ್ರದುರ್ಗದಲ್ಲಿ ಒಟ್ಟಿಗೆ ಸೇರಿ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಪಾದಯಾತ್ರೆ ಆರಂಭಿಸಿದರು. ಮಾರ್ಗದುದ್ದಕ್ಕೂ ತಾಯಂದಿರ ಹೋರಾಟಕ್ಕೆ ಸಾಕಷ್ಟು ಬೆಂಬಲ ಸಿಕ್ಕಿದ್ದು, ಇನ್ನಷ್ಟು ಮಹಿಳೆಯರು ಜಾಥಾ ಜೊತೆಗೆ ಸೇರಿದ್ಧಾರೆ. ದುರಂತದ ಸಂಗತಿಯೆಂದರೆ ರಾಯಚೂರು ಮೂಲದ ರೇಣುಕಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಪಾದಯಾತ್ರೆ ವೇಳೆ ರಾತ್ರಿ ಹೆದ್ದಾರಿಯಲ್ಲಿ ಯುವಕನೊಬ್ಬ ಬೈಕ್ ಗುದ್ದಿದ ಪರಿಣಾಮ ಅಪಘಾತಕ್ಕೆ ಬಲಿಯಾಗಿದ್ದಾರೆ.

ಇನ್ನು ಮದ್ಯಪಾನ ನಿಷೇಧಿಸಿ ಎನ್ನುವ ಬೇಡಿಕೆ ಹೊಸದೇನಲ್ಲ. ಆಗಾಗ ಮಹಿಳೆಯರು ಮದ್ಯದಂಗಡಿಗಳನ್ನು ಎತ್ತಂಗಡಿ ಮಾಡಲು ಹೋರಾಟ ನಡೆಸಿರುವುದು ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಮದ್ಯ ನಿಷೇಧಿಸಬೇಕೆಂದು ಆಗ್ರಹಿಸಿ ರಾಜ್ಯವ್ಯಾಪಿಯಾದ ಒಗ್ಗಟ್ಟಿನಿಂದ ಹೋರಾಟ ನಡೆಯುತ್ತಿರುವುದು ಇದೇ ಮೊದಲು. ಈ ಹೋರಾಟದಲ್ಲಿ ಭಾಗವಹಿಸುತ್ತಿರುವ ಮಹಿಳೆಯರು ದಿನಗಟ್ಟಲೆ ಮನೆ-ಮಕ್ಕಳು, ಸಂಸಾರವನ್ನು ಬಿಟ್ಟು ನಡೆಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ದಿನಗೂಲಿ ಕಾರ್ಮಿಕರು. ಅವರ ಹೋರಾಟದ ಕೆಚ್ಚನ್ನು ನೋಡಿದಾಗ ಮದ್ಯಪಾನದ ವ್ಯಸನದಿಂದ ಅವರೆಷ್ಟು ನೊಂದಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು.
ಹಿಂದಿನ ಕಾಲಘಟ್ಟದಿಂದಲೂ ಮಾನವ ಒಂದಲ್ಲ ಒಂದು ವ್ಯವಸನಕ್ಕೆ ದಾಸನೇ ಆಗುತ್ತಿದ್ದಾನೆ. ತನ್ನ ಬದುಕನ್ನು ಆರೋಗ್ಯಕರವಾಗಿ ಅರಳಿಸುವ ಬದಲು ನರಳಿಸುವ ಈ ವ್ಯಸನಗಳು, ಕುಟುಂಬಗಳ ಸ್ವಾಸ್ಥಕ್ಕೆ ಬಹು ದೊಡ್ಡ ಪೆಟ್ಟಾಗಿದೆ. ಇಂತಹ ಸಂದರ್ಭದಲ್ಲಿ ಮದ್ಯ ಮುಕ್ತ ಕರ್ನಾಟಕ ಕಟ್ಟುವ ಉದ್ದೇಶದಿಂದ ಬೃಹತ್ ಆಂದೋಲನವೊಂದನ್ನು ಮಹಿಳೆಯರೇ ರೂಪಿಸಿಕೊಂಡಿದ್ದು, ವ್ಯಸನದ ದಾಸ್ಯ ತಪ್ಪಿಸಲು ದಿಟ್ಟ ಹೆಜ್ಜೆಗಳನ್ನೇ ಹಾಕಲು ಮುಂದಾಗಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕನಸುಗಳಲ್ಲಿ ಪ್ರಮುಖವಾದ ಮದ್ಯ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಬದ್ಧವಾಗಿರುವ ಮದ್ಯ ನಿಷೇಧ ಆಂದೋಲನ ಕರ್ನಾಟಕ. ಇದೇ ತಿಂಗಳ 19ರಿಂದ ಪಾದಯಾತ್ರೆ ಆರಂಭಿಸಿದ ಹೋರಾಟಕ್ಕೆ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಮಹಿಳೆಯರು ಕೈ ಜೋಡಿಸಿದ್ದಾರೆ. ಇಂದು ನಾವು ಮದ್ಯ ನಿಷೇಧಕ್ಕೆ ಒತ್ತಡ ಹಾಕಲಿದ್ದೇವೆ. ಸರ್ಕಾರ ಮದ್ಯ ನಿಷೇಧ ಸೇರಿದಂತೆ ನಮ್ಮ ವಿವಿಧ ಬೇಡಿಕೆಗಳಿಗೆ ಸ್ಪಂದಿಸಬೇಕು. ಹೀಗಾಗಿಯೇ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಚಳುವಳಿ ಹಮ್ಮಿಕೊಳ್ಳಲಾಗಿದೆ. ಒಟ್ಟು 12 ದಿನಗಳ ಕಾಲ ಮದ್ಯ ನಿಷೇಧಕ್ಕೆ ದಿಟ್ಟ ಹೆಜ್ಜೆ ಹಾಕಿದ್ದೇವೆ. ಮುಂದೆಯೂ ನಮ್ಮ ಹೋರಾಟ ಮುಂದುವರೆಯಲಿದೆ ಎನ್ನುತ್ತಾರೆ ಮಹಿಳಾ ಹೋರಾಟಗಾರರೊಬ್ಬರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ