ಬೆಂಗಳೂರು, ಜ.30- ಬರ ಪರಿಹಾರ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿರುವುದು ತುಂಬಾ ನೋವುಂಟು ಮಾಡಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಹುತಾತ್ಮರ ದಿನಾಚರಣೆ ಅಂಗವಾಗಿ ವಿಕಾಸಸೌಧ ಹಾಗೂ ವಿಧಾನಸೌಧ ನಡುವೆ ಇರುವ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಸುಮಾರು 900ಕೋಟಿ ರೂ. ಪರಿಹಾರ ಧನ ಬಿಡುಗಡೆ ಮಾಡಿದೆ. ಆದರೆ, ನೆರೆಯ ಮಹಾರಾಷ್ಟ್ರಕ್ಕೆ 4ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಇದು ನಮಗೆ ನಿರಾಸೆ ತಂದಿದೆ ಎಂದರು.
ಮತ್ತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ಸಿಂಗ್ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಹೆಚ್ಚಿನ ಬರಪರಿಹಾರ ಧನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು. ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿ ಇದ್ದು, 2500 ಕೋಟಿ ರೂ. ಪರಿಹಾರ ಧನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು.
ಕೇಂದ್ರದ ಅಧ್ಯಯನ ತಂಡಗಳು ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನ ಮಾಡಿ ವರದಿಯನ್ನೂ ಸಹ ನೀಡಿತ್ತು. ಆದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣ ತೃಪ್ತಿ ತಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತದಾರರನ್ನು ಓಲೈಸುವ ಉದ್ದೇಶದಿಂದ ಮಹಾರಾಷ್ಟ್ರಕ್ಕೆ ಹೆಚ್ಚಿನ ಪರಿಹಾರ ಧನ ಬಿಡುಗಡೆ ಮಾಡಿರಬಹುದು ಎಂದು ಅವರು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಪಾನ ನಿಷೇಧ ಮಾಡುವಂತೆ ಮಹಿಳೆಯರು ಪಾದಯಾತ್ರೆ ಮೂಲಕ ಬೆಂಗಳೂರಿಗೆ ಬಂದಿದ್ದರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧ ಮಾಡಲು ಏಕಾಏಕಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ತಾವು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಸರಾಯಿ ನಿಷೇಧಿಸಲಾಗಿತ್ತು. ಮದ್ಯ ನಿಷೇಧ ಮಾಡುವ ವಿಚಾರದ ಬಗ್ಗೆ ಹಲವು ಸಾಧಕ-ಬಾಧಕ ಕುರಿತು ಚರ್ಚೆ ಮಾಡಬೇಕಿದೆ. ಅಧಿಕಾರಿಗಳು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಇದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹುತಾತ್ಮರ ದಿನಾಚರಣೆ ಅಂಗವಾಗಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಸಾ.ರಾ.ಮಹೇಶ್, ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.