ಬೆಂಗಳೂರು, ಜ.29-ಕೇಂದ್ರದ ಮಾಜಿ ಸಚಿವ ಹಾಗೂ ರೈತ ಮುಖಂಡ ಬಾಬಾ ಗೌಡ ಪಾಟೀಲ್ ನೇತೃತ್ವದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ನಿಯೋಗ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿತು.
ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗ ಯೂರಿಯಾ ನಿಷೇಧ ಮಾಡಬೇಕು, ಕೃಷಿ ಪರಿಕರಗಳ ನಿಷೇಧ ತೆರವು ಮಾಡಬೇಕು, ಬೆಳಗಾವಿ ಸುವರ್ಣಸೌಧದ ಬಳಿ ಕೃಷಿ ಪಾರ್ಕ್ ನಿರ್ಮಾಣ ಮಾಡಬೇಕು, ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ರೈತರ ಜಮೀನುಗಳ ಸಮಸ್ಯೆ ನಿವಾರಿಸಬೇಕು. ವಯೋವೃದ್ಧರಿಗೆ ಉಚಿತ ಗ್ಯಾಸ್ ಮತ್ತು ಪಡಿತರ ವಿತರಿಸಬೇಕು, ಆರು ತಿಂಗಳಿಗೊಮ್ಮೆ ರಕ್ತಹೀನತೆಯಿಂದ ಬಳಲುವವರಿಗೆ ಉಚಿತ ಔಷಧಿ ವಿತರಿಸಬೇಕು ಎಂದು ಆಗ್ರಹಿಸಿದರು.
ರೈತರ ಜಮೀನುಗಳಲ್ಲಿ ಬೆಳೆದಿರುವ ಗಿಡ, ಮರಗಳ ಕಟಾವಿಗೆ ಇರುವ ನಿಯಮ ಸರಳೀಕರಣಗೊಳಿಸಬೇಕು. ತೊಗರಿ, ಕಡಲೆ, ಜೋಳ, ಭತ್ತಕ್ಕೆ ಬೆಂಬಲ ಬೆಲೆ ನೀಡಿ ಸುಗ್ಗಿ ಮುಂಚಿತವಾಗಿ ಖರೀದಿ ಕೇಂದ್ರ ಆರಂಭಿಸಬೇಕು. ಗ್ರಾ.ಪಂ. ವ್ಯಾಪ್ತಿಯಲ್ಲಿ 10ನೇ ತರಗತಿ ಒಳಗಿನ ಮಕ್ಕಳಿಗೆ ಒಳಮೀಸಲಾತಿ ಸೌಲಭ್ಯ ಕಲ್ಪಿಸಲು ತಿದ್ದುಪಡಿ ತರಬೇಕು.ಬರಗಾಲದಿಂದ ಜನ ಗುಳೇ ಹೋಗುತ್ತಿದ್ದು, ಇದಕ್ಕೆ ಪರಿಹಾರ ಒದಗಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.