ಬೆಂಗಳೂರು, ಜ.28-ಶಾಸಕ ಉಮೇಶ್ ಜಾದವ್ ಅವರ ನಡೆ ಇನ್ನೂ ನಿಗೂಢವಾಗಿದೆ.ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತಗೊಂಡು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾದ ಶಾಸಕರು ಇಂದೂ ಬೆಂಗಳೂರಿನಲ್ಲಿ ತಮ್ಮ ಆಪ್ತರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದೆರಡು ದಿನಗಳ ಹಿಂದೆಯಷ್ಟೆ ತಮ್ಮ ಸ್ವಗ್ರಾಮದಲ್ಲಿ ತಮ್ಮ ಆಪ್ತರು, ಬೆಂಬಲಿಗರೊಂದಿಗೆ ಸಭೆ ನಡೆಸಿದ್ದ ಉಮೇಶ್ ಜಾದವ ಅವರು ನಾನು ಕಾಂಗ್ರೆಸ್ ಪಕ್ಷದ ಕಟ್ಟಾ ಬೆಂಬಲಿಗ.ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಕಾಂಗ್ರೆಸ್ನಲ್ಲಿ ಕೆಲ ಬದಲಾವಣೆಗಳಾಗಬೇಕು.ನಮಗಿರುವ ಅಸಮಾಧಾನವನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದರು.
ಕ್ಷೇತ್ರದ ಅಭಿವೃದ್ಧಿ, ಅನುದಾನದ ವಿಷಯದಲ್ಲಿ ಅಸಮಾಧಾನವಿತ್ತು.ಅಷ್ಟನ್ನು ಹೊರತುಪಡಿಸಿ ಯಾವುದೇ ಅಸಮಾಧಾನವಿಲ್ಲ. ನಾನು ಯಾವುದೇ ಆಸೆ, ಹಣದ ಆಮಿಷಕ್ಕೆ ಒಳಗಾಗುತ್ತಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.ಆದರೆ, ಇನ್ನೂ ಅವರ ನಡೆ ನಿಗೂಢವಾಗಿದೆ.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಜಾದವ್ ಅವರನ್ನು ನೇಮಕ ಮಾಡಲಾಗಿದ್ದರೂ ಇನ್ನೂ ಅವರು ನಿಗಮದ ಅಧ್ಯಕ್ಷರಾಗಿ ಪದಗ್ರಹಣ ಮಾಡಿಲ್ಲ. ಚಿಂಚೋಳಿ ಕ್ಷೇತ್ರದಿಂದ ಬೆಂಗಳೂರಿಗೆ ಆಗಮಿಸಿರುವ ಅವರು ಬೆಂಬಲಿಗರು, ಆಪ್ತರೊಂದಿಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಕ್ಷೇತ್ರದಲ್ಲಿ ತೀವ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಅವರು ನೀಡುತ್ತಿಲ್ಲ. ಎರಡು ಬಾರಿ ಗೆದ್ದಿರುವ ನನಗೆ ಕ್ಷೇತ್ರದಲ್ಲಿ ಯಾವುದೇ ಮನ್ನಣೆ ಸಿಗುತ್ತಿಲ್ಲ. ಅಲ್ಲದೆ, ಪಕ್ಷದ ಹಿರಿಯ ನಾಯಕರಾದ ಖರ್ಗೆ ಅವರು ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ತಮ್ಮ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಎರಡು ವಾರಗಳ ಹಿಂದೆ ಆಪರೇಷನ್ ಕಮಲ ವದಂತಿ ದಟ್ಟವಾಗಿತ್ತು.ಅತೃಪ್ತ ಕಾಂಗ್ರೆಸ್ ಶಾಸಕರು ಮುಂಬೈ ರೆಸಾರ್ಟ್ನಲ್ಲಿ ಬೀಡು ಬಿಟ್ಟಿದ್ದರು ಎನ್ನಲಾಗಿತ್ತು. ಇವರೊಂದಿಗೆ ಉಮೇಶ್ ಜಾದವ್ ಕೂಡ ಕೈ ಜೋಡಿಸಿದ್ದರು.ಆದರೆ, ಆಪರೇಷನ್ ಕಮಲ ಸಕ್ಸಸ್ ಆಗದ ಹಿನ್ನೆಲೆಯಲ್ಲಿ ಎಲ್ಲರೂ ಹಿಂದಿರುಗಿದ್ದರು.
ಶಾಸಕರಾದ ಮಹೇಶ್ ಕಮಟಳ್ಳಿ, ನಾಗೇಂದ್ರ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ಬಗ್ಗೆ ಪಕ್ಷದ ನಾಯಕರಿಗೆ ವಿವರ ನೀಡಿದ್ದರು.
ಅತೃಪ್ತರ ನಡೆ ಇನ್ನೂ ನಿಗೂಢವಾಗಿಯೇ ಇದೆ. ಈ ನಡುವೆ ಸ್ಪಷ್ಟನೆ ನೀಡಿದ್ದ ಉಮೇಶ್ ಜಾದವ್ ಅವರ ನಡೆ ಕೂಡ ಮತ್ತಷ್ಟು ನಿಗೂಢವಾಗಿದೆ. ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಈವರೆಗೆ ವಹಿಸಿಕೊಳ್ಳದಿರುವುದು ಅವರ ಅಸಮಾಧಾನದ ಅನುಮಾನವನ್ನು ಮತ್ತಷ್ಟು ಬಲಪಡಿಸಿದೆ.