ಬೆಂಗಳೂರು, ಜ.28-ಬಹು ನಿರೀಕ್ಷಿತ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಸಜ್ಜಾಗಿದ್ದೇವೆ. ಅದಕ್ಕಾಗಿ ಹೊಸದಾಗಿ ಡಿಪಿಆರ್ ತಯಾರು ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಪಿಆರ್ ನಂತರ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಬೆಂಗಳೂರಿನ ಉತ್ತರ ವಿಭಾಗದವರು ನಮಗೆ ಸ್ಟೀಲ್‍ಬ್ರಿಡ್ಜ್ ಬೇಕು ಎನ್ನುತ್ತಿದ್ದಾರೆ.ಸಿಎಂ ಜತೆ ಚರ್ಚಿಸಿ ಸ್ಟೀಲ್‍ಬ್ರಿಡ್ಜ್ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಂಚಾರಿ ದಟ್ಟಣೆ ನಿಯಂತ್ರಿಸಲು ಸ್ಟೀಲ್‍ಬ್ರಿಡ್ಜ್ ಅತ್ಯವಶ್ಯಕವಾಗಿದೆ.ಸ್ಟೀಲ್‍ಬ್ರಿಡ್ಜ್ ಎಂದರೆ ಕೇವಲ ಸ್ಟೀಲ್ ಇರಲ್ಲ, ಅದರಲ್ಲಿ ಸಿಮೆಂಟ್ ಸಹ ಇರುತ್ತದೆ ಎಂದು ಪರಮೇಶ್ವರ್ ತಮಾಷೆ ಮಾಡಿದರು.
ಶಾಸಕರಿಗೆ ಮಾಹಿತಿ ಕೊರತೆ:
ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿಯಾಗುತ್ತಿಲ್ಲ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಗರಂ ಆಗಿರುವ ಪರಂ ಅವರು ಸೋಮಶೇಖರ್ ಅವರಿಗೆ ಮಾಹಿತಿ ಕೊರತೆ ಇದೆ.ಅವರಿಗೆ ಸರಿಯಾದ ಮಾಹಿತಿ ನೀಡುತ್ತೇವೆ. ನಮ್ಮ ಸರ್ಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ನಾವು ಕೂಡ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರ ರಚನೆಯಾಗಿ ಏಳು ತಿಂಗಳಾಗಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ.ಎಸ್.ಟಿ.ಸೋಮಶೇಖರ್ ಅವರಿಗೆ ಮಾಹಿತಿ ನೀಡಿ ಸರಿಮಾಡೋಣ ಎಂದು ಹೇಳಿದ್ದಾರೆ.