ನವದೆಹಲಿ, ಜ.28- ಭಾರತೀಯ ರೈಲ್ವೆ ಅತಿಥ್ಯ ಮತ್ತು ಪ್ರವಾಸೋದ್ಯಮ ನಿಗಮ(ಐಆರ್‍ಸಿಟಿಸಿ) ಹಗರಣಕ್ಕೆ ಸಂಬಂಧಪಟ್ಟ ಹಣ ದುರ್ಬಳಕೆ ಪ್ರಕರಣದಲ್ಲಿ ಆರ್‍ಜೆಡಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಅವರ ಪತ್ನಿ-ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಹಾಗೂ ಪುತ್ರ-ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ದೆಹಲಿಯ ನ್ಯಾಯಾಲಯವೊಂದು ಇಂದು ಜಾಮೀನು ನೀಡಿದೆ.
ವಿಶೇಷ ನ್ಯಾಯಾಧೀಶ ಅರುಣ್ ಭರದ್ವಾಜ್ ಅವರು ಈ ಮೂವರಿಗೆ ತಲಾ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಶೂರಿಟಿ ಮೇಲೆ ಜಾಮೀನು ಮಂಜೂರು ಮಾಡಿದರು.
ಲಾಲು, ರಾಬ್ಡಿ ಮತ್ತು ತೇಜಸ್ವಿ ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ನ್ಯಾಯಾಲಯ ಜ.19ರವರೆಗೂ ವಿಸ್ತರಿಸಿತ್ತು.
ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ ಖಾಸಗಿ ಸಂಸ್ಥೆಯೊಂದಕ್ಕೆ ಎರಡು ಐಆರ್‍ಸಿಟಿಸಿ ಹೋಟೆಲ್‍ಗಳ ಕಾರ್ಯನಿರ್ವಹಣೆ ಗುತ್ತಿಗೆ ನೀಡುವಾಗ ನಡೆದ ಭಾರೀ ಅಕ್ರಮ-ಅವ್ಯವಹಾರ ಮತ್ತು ಹಣ ದುರುಪಯೋಗ ಪ್ರಕರಣ ಇದಾಗಿದೆ.