ಮೈತ್ರಿ ಸರ್ಕಾರದ ವಿಚಾರದಲ್ಲಿ ಅನಾವಶ್ಯಕ ಗೊಂದಲ ಬೇಡ: ವೈ.ಎಸ್.ವಿ.ದತ್ತ

ಬೆಂಗಳೂರು,ಜ.28-ಮೈತ್ರಿ ಸರ್ಕಾರದ ವಿಚಾರದಲ್ಲಿ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುವುದು ಬೇಡ. ಕಾಂಗ್ರೆಸ್-ಜೆಡಿಎಸ್‍ನ ಅತ್ಯುಗ್ರ ಅಭಿಮಾನಿಗಳನ್ನು ದೂರ ಇಡಬೇಕಿದೆ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.

ಜೆಡಿಎಸ್ ಕಚೇರಿ ಜೆಪಿಭವನದಲ್ಲಿಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಜವಾಬ್ದಾರಿ ಸ್ವೀಕರಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‍ನವರೇ ಕರೆದು ಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಗಮವಾಗಿ ನಡೆಯಲು ಕಾಂಗ್ರೆಸ್ ಜವಾಬ್ದಾರಿಯುತವಾಗಿ ವರ್ತಿಸಬೇಕಿದೆ ಎಂದು ಹೇಳಿದರು.

ಇಂದಿನ ಸನ್ನಿವೇಶದಲ್ಲಿ ಮನಸ್ಸಿಗೆ ನೋವುಂಟು ಮಾಡುವ ಅಥವಾ ಸರ್ಕಾರಕ್ಕೆ ಮುಜುಗರ ತರುವ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದ ಅವರು, ಅತ್ಯುಗ್ರ ಅಭಿಮಾನಿಗಳನ್ನು ದೂರ ಇಡದಿದ್ದರೆ ಮಾತಿನ ಭರದಲ್ಲಿ ಉಭಯ ಪಕ್ಷಗಳ ನಾಯಕರಿಗೆ ಸಂಕಷ್ಟ ತಂದೊಡ್ಡಲಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಜುಗರಕ್ಕೆ ಒಳಗಾಗುವ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸರ್ಕಾರದ ಆಡಳಿತ ವಿಚಾರದಲ್ಲಿ ಯಾರೂ ಗೊಂದಲ ಸೃಷ್ಟಿಸಬಾರದು ಎಂದರು.

ಮುಖ್ಯಮಂತ್ರಿಯವರು ಭಾವನಾತ್ಮಕವಾಗಿ ಇಂದು ಮಾತನಾಡಿದ್ದಾರೆ.ಮೈತ್ರಿ ಸರ್ಕಾರದಲ್ಲಿ ಕೆಲವೊಂದು ಸಹಜ ಬೆಳವಣಿಗೆಗಳು ನಡೆಯುತ್ತವೆ. ಇದನ್ನು ಕಾಂಗ್ರೆಸ್‍ನವರು ಅರ್ಥ ಮಾಡಿಕೊಳ್ಳಬೇಕು. ಸಣ್ಣಪುಟ್ಟ ವಿಚಾರಗಳಿಗೂ ದೋಸ್ತಿ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮದು ಪ್ರಾದೇಶಿಕ ಪಕ್ಷವಾದರೂ ರಾಷ್ಟ್ರೀಯ ಪಕ್ಷಕ್ಕೆ ಬೆಂಬಲ ನೀಡಿದ್ದೇವೆ ಎಂದು ಹೇಳಿದರು.

ನಾನು ಪಕ್ಷದ ಹಿರಿಯ ಕಾರ್ಯಕರ್ತನಾಗಿದ್ದು ಶಿಸ್ತಿನ ಸಿಪಾಯಿ. ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಆರೋಗ್ಯ ಕಾರಣಕ್ಕಾಗಿ ವಿಶ್ರಾಂತಿ ನಡುವೆಯೂ ಪಕ್ಷದ ಜವಾಬ್ದಾರಿಯುತ ಕಾರ್ಯಗಳನ್ನು ನಿಭಾಯಿಸುವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ದೇಶದ ಹಿತದೃಷ್ಟಿಯಿಂದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಹೋರಾಟ ಮಾಡಬೇಕಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೈಗೊಳ್ಳಬೇಕಿರುವ ಕಾರ್ಯತಂತ್ರಗಳ ಬಗ್ಗೆಯೂ ಚರ್ಚಿಸಬೇಕಿದ್ದು, ಇದನ್ನು ಕಾಂಗ್ರೆಸ್‍ನವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ