ಬೆಂಗಳೂರು, ಜ.28- ಕಾಂಗ್ರೆಸ್ ಶಾಸಕರು ತಮ್ಮ ವರ್ತನೆಗಳನ್ನು ತಿದ್ದಿಕೊಳ್ಳದಿದ್ದರೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.
ಕುಮಾರಸ್ವಾಮಿ ಅವರ ಈ ಹೇಳಿಕೆ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಒಂದೆಡೆ ಆಪರೇಷನ್ ಕಮಲದ ಭೀತಿಯಿಂದ ದೋಸ್ತಿ ಸರ್ಕಾರದ ಭವಿಷ್ಯ ಏನಾಗಲಿದೆಯೋ ಎಂಬ ಭೀತಿ ಆವರಿಸಿರುವಾಗಲೇ ಸಿಎಂ ಹೇಳಿಕೆ ಸರ್ಕಾರವನ್ನೇ ಬೆಚ್ಚಿಬೀಳಿಸಿದೆ.
ನನ್ನ ಕಾರ್ಯವೈಖರಿ ಯಾರಿಗಾದರೂ ಇಷ್ಟವಾಗದಿದ್ದರೆ ನನ್ನ ಸ್ಥಾನವನ್ನು ತ್ಯಾಗ ಮಾಡಲು ಸಿದ್ಧ.ನನಗೆ ಈ ಕುರ್ಚಿಗೆ ಅಂಟಿಕೊಂಡಿರಲು ಇಷ್ಟವಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡಲು ಮೈತ್ರಿ ಸರ್ಕಾರ ರಚನೆ ಮಾಡಿದ್ದೇವೆ. ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳನ್ನೊಡಗೂಡಿ ಬೆಂಗಳೂರು ಅಭಿವೃದ್ಧಿ ಸೇರಿದಂತೆ ರಾಜ್ಯದ ಹಿತಕ್ಕಾಗಿ ಸಾಕಷ್ಟು ಯೋಜನೆಗಳನ್ನು ತಂದಿದ್ದೇವೆ. ನಗರದ ಅಭಿವೃದ್ಧಿಗೆ ಹೊರ ವರ್ತುಲ ರಸ್ತೆ, ಸಬರ್‍ಬನ್ ರೈಲು ಸೇರಿದಂತೆ ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ಇದಕ್ಕಾಗಿ ಒಂದು ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ನಗರಾಭಿವೃದ್ಧಿಗೆ ಬಳಸಲಾಗುತ್ತಿದೆ ಎಂದು ವಿವರಿಸಿದರು. ಆದರೆ, ನನ್ನ ಕಾರ್ಯವೈಖರಿ ಕೆಲವರಿಗೆ ಇಷ್ಟವಾಗುತ್ತಿಲ್ಲವೇನೊ. ಯಾರಿಗಾದರೂ ಇಷ್ಟವಾಗದಿದ್ದರೆ ಕುರ್ಚಿ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು.
ನಿನ್ನೆಯಷ್ಟೆ ಬೆಂಗಳೂರಿನಲ್ಲಿ ಕನಕಭವನ ಉದ್ಘಾಟನೆ ವೇಳೆ ಕಾಂಗ್ರೆಸ್‍ನ ಕೆಲ ಸಚಿವರು ಮತ್ತು ಶಾಸಕರು ಮಾತನಾಡಿದ್ದು ಕುಮಾರಸ್ವಾಮಿ ಅವರನ್ನು ಕೆರಳುವಂತೆ ಮಾಡಿದೆ.
ರಾಷ್ಟ್ರೀಯ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕರ ವರ್ತನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನಗೂ ಇತಿಮಿತಿ ಎಂಬುದು ಇದೆ.ಅವರ ವರ್ತನೆಗಳು ಇದೇ ರೀತಿ ಮುಂದುವರಿದರೆ ಅಧಿಕಾರದಿಂದ ಕೆಳಗಿಳಿಯಲು ನಾನು ಸಿದ್ಧ ಎಂದು ಕಾಂಗ್ರೆಸ್‍ಗೆ ನೇರವಾಗೇ ಎಚ್ಚರಿಕೆ ಕೊಟ್ಟಿದ್ದಾರೆ.
ನಾನು ಅಧಿಕಾರಕ್ಕೆ ಅಂಟಿಕೊಂಡು ಕುಳಿತವನಲ್ಲ. ಸಮ್ಮಿಶ್ರ ಸರ್ಕಾರ ಎಂದ ಮೇಲೆ ಮೈತ್ರಿ ಪಾಲನೆಯಾಗಲೇಬೇಕು.ನಮ್ಮ ಶಾಸಕರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.ನೀವು ದೊಡ್ಡವರಂತೆ ವರ್ತಿಸಿದರೆ ಸಹಿಸಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಕೆಂಡಾಮಂಡಲವಾದರು.
ಹಲವು ದಿನಗಳಿಂದ ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿದ್ದ ಒಳ ಬೇಗುದಿ ಮೊದಲ ಬಾರಿಗೆ ಜಗಜ್ಜಾಹೀರಾಗಿದೆ. ಅಷ್ಟಕ್ಕೂ ಕುಮಾರಸ್ವಾಮಿ ಈ ಹೇಳಿಕೆ ಕಾರಣವೇನೆಂದರೆ ನಿನ್ನೆ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಶಾಸಕರು ಅವರೇ ನಾಚಿ ನೀರಾಗುವಂತೆ ಹೊಗಳಿ ಅಟ್ಟಕ್ಕೇರಿಸಿದ್ದು.
ಹೇಳಿದ್ದೇನು: ಸಚಿವರಾದ ಪುಟ್ಟರಂಗಶೆಟ್ಟಿ ಈಗಲೂ ಸಿದ್ದರಾಮಯ್ಯನವರೇ ನನಗೆ ಮುಖ್ಯಮಂತ್ರಿ ಎಂದು ಹೇಳಿದ್ದರು. ಮತ್ತೋರ್ವ ಸಚಿವ ಎಂ.ಟಿ.ಬಿ.ನಾಗರಾಜ್, ಹನುಮಂತನ ಎದೆ ಬಗೆದರೆ ರಾಮ-ಸೀತೆ-ಲಕ್ಷ್ಮಣ ಹೇಗೆ ಕಾಣುತ್ತಾರೋ ಅದೇ ರೀತಿ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದರು.
ಇನ್ನು ಬೆಂಗಳೂರು ನಗರಾಭಿವೃದ್ಧಿ ಅಧ್ಯಕ್ಷರಾಗಿರುವ ಎಸ್.ಟಿ.ಸೋಮಶೇಖರ್, ಕಳೆದ ಏಳು ತಿಂಗಳಿಂದ ಬೆಂಗಳೂರು ಅಭಿವೃದ್ಧಿ ಆಗಿಲ್ಲ. ಒಂದೇ ಒಂದು ರಸ್ತೆ ಗುಂಡಿಯನ್ನೂ ಮುಚ್ಚಲು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರೆ ಬೆಂಗಳೂರಿನ ಅಭಿವೃದ್ಧಿಯ ಚಿತ್ರಣವೇ ಬದಲಾಗುತ್ತಿತ್ತು ಎಂದು ಸಿಎಂ ಬಗ್ಗೆ ಕುಹಕವಾಡಿದ್ದರು.
ಇನ್ನು ಒಂದು ಹೆಜ್ಜೆ ಮುಂದೆ ಹೋದ ಎಸ್.ಟಿ.ಸೋಮಶೇಖರ್, ಕೆಲವರು ರಾಜಕಾರಣದಲ್ಲಿ ಬೆಳೆಯಲು ಬಿಡುವುದೇ ಇಲ್ಲ. ಸೊಸೆ, ಮಕ್ಕಳು, ಮೊಮ್ಮಕ್ಕಳು ಮಾತ್ರ ಬೆಳೆಯಲಿ ಎಂದು ಆಶಿಸುತ್ತಾರೆ ಎನ್ನುವ ಮೂಲಕ ಜೆಡಿಎಸ್ ವರಿಷ್ಠ ದೇವೇಗೌಡರಿಗೂ ಟಾಂಗ್ ನೀಡಿದ್ದರು.
ಕಾಂಗ್ರೆಸ್ ನಾಯಕರ ಈ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದಿದ್ದ ಕುಮಾರಸ್ವಾಮಿ, ಮೊದಲ ಬಾರಿಗೆ ದೋಸ್ತಿ ಪಕ್ಷದ ವಿರುದ್ಧ ನೇರವಾಗಿಯೇ ಬಿಸಿ ಮುಟ್ಟಿಸಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಪ್ರಾದೇಶಿಕ ಪಕ್ಷಗಳೆಲ್ಲವೂ ಒಂದಾಗಬೇಕೆಂದು ಹೇಳುತ್ತಿರುವಾಗಲೇ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ನಡುವೆ ವೈಮನಸ್ಸು ಮೂಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.