ಬೆಂಗಳೂರು, ಜ.27- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.
ಜೆ.ಪಿ.ಭವನದಲ್ಲಿಂದು ಬೆಂಗಳೂರು ನಗರದ ಸಂಸದರು, ಶಾಸಕರೊಂದಿಗೆ ಲೋಕಸಭೆ ಚುನಾವಣೆಯ ಪೂರ್ವ ಸಿದ್ದತೆ ನಡೆಸಿದ ನಂತರ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳು ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಯಾವುದೇ ರೀತಿಯ ಚರ್ಚೆಯಾಗಲಿಲ್ಲ. ಒಂದು ವೇಳೆ ಚುನಾವಣಾ ಪೂರ್ವ ಮೈತ್ರಿಯಾದರೆ ನಮಗೆ ಯಾವ ಕ್ಷೇತ್ರಗಳನ್ನು ಕೊಡುತ್ತಾರೋ, ಕಾಂಗ್ರೆಸ್‍ನವರು ಯಾವ ಕ್ಷೇತ್ರಗಳನ್ನು ಉಳಿಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ. ಚುನಾವಣೆಯನ್ನು ಉಭಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಎದುರಿಸಬೇಕಿದೆ. ಬೆಂಗಳೂರಿನ ಒಂದೊಂದು ಲೋಕಸಭಾ ಕ್ಷೇತ್ರಕ್ಕೂ ಒಬ್ಬರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು. ಇದರ ಉಸ್ತುವಾರಿಯನ್ನು ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿಯವರಿಗೆ ನೀಡಲಾಗುವುದು ಎಂದರು.
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರದ ಬಗ್ಗೆ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಪಡೆದಿದ್ದಾರೆ. ಇಂದು ಬೆಂಗಳೂರಿನ ಲೋಕಸಭಾ ಕ್ಷೇತ್ರಗಳ ಹಾಗೂ 28 ವಿಧಾನಸಭಾ ಕ್ಷೇತ್ರವಾರು ಸಂಘಟನೆ ಬಗ್ಗೆ ಚರ್ಚೆ ನಡೆಸಲಾಗಿದೆ. ಹಾಸನ ಲೋಕಸಭಾ ಕ್ಷೇತ್ರದಿಂದ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸುವುದಾಗಿ ಈ ಹಿಂದೆ ಹೇಳಿದ್ದೇನೆ. ಅದು ತಮ್ಮ ಅಭಿಪ್ರಾಯ. ಇನ್ನು ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆಯಾಗಿ ಅಂತಿಮಗೊಂಡಿಲ್ಲ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ತಾವು ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ಚರ್ಚೆ ಬೇಡ. ಅದರ ಬಗ್ಗೆ ಮುಂದೆ ನೋಡೋಣ ಎಂದಷ್ಟೇ ಗೌಡರು ಹೇಳಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮೀಟರ್ ಬಡ್ಡಿ ದಂಧೆಯಿಂದ ಬಡವರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಬಡ್ಡಿ ರಹಿತ ಸಾಲ ನೀಡುವ ಬಡವರ ಬಂಧು ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಸಭೆಯಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಶಾಸಕರಾದ ಗೋಪಾಲಯ್ಯ, ಮಂಜುನಾಥ್, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ವಕ್ತಾರ ರಮೇಶ್‍ಬಾಬು, ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.