ಬೆಂಗಳೂರು, ಜ.27- ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಮೋಡಕವಿದ ವಾತಾವರಣ ಕಂಡು ಬಂದಿದ್ದು, ನಾಳೆಯವರೆಗೂ ಕೆಲವೆಡೆ ಹಗುರದಿಂದ ಮಳೆಯಾಗುವ ಸಾಧ್ಯತೆಗಳಿವೆ.
ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.
ವಾತಾವರಣದ ಗಾಳಿಯಲ್ಲಿ ಒತ್ತಡ (ಟ್ರಪ್)ಕಡಿಮೆಯಾಗಿರುವುದರಿಂದ ಮೋಡಕವಿದ ವಾತಾವರಣ ಕಂಡು ಬಂದಿದ್ದು, ನಾಳೆವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದೆ. ರಾಜ್ಯದ ಒಳನಾಡಿನ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಆದರೆ, ಭಾರೀ ಮಳೆಯಾಗುವ ಲಕ್ಷಣಗಳು ಕಂಡು ಬಂದಿಲ್ಲ ಎಂದು ಹೇಳಿದರು.
ಹಗಲಿನ ವೇಳೆ ಉಷ್ಣಾಂಶ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಚಳಿ ಪ್ರಮಾಣ ಇಳಿಯಾಗಲಿದೆ. ಕನಿಷ್ಠ ತಾಪಮಾನದಲ್ಲೂ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲೂ ಚಳಿಯ ಪ್ರಮಾಣ ಕಡಿಮೆಯಾಗುತ್ತಾ ಹೋಗಲಿದೆ ಎಂದು ಅವರು ತಿಳಿಸಿದರು.