ಭುವನೇಶ್ವರ್: ಕೇಂದ್ರ ಸರ್ಕಾರ ಘೋಷಿಸಿದ್ದ ಪದ್ಮ ಪ್ರಶಸ್ತಿಯನ್ನು ಖ್ಯಾತ ಲೇಖಕಿ ಗೀತಾ ಮೆಹ್ತಾ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ.
ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಗೀತಾ ಮೆಹ್ತಾಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿತ್ತು. ಆದರೆ ಮೆಹ್ತಾ ಪ್ರಶಸ್ತಿ ನಿರಾಕರಿಸಿದ್ದಾರೆ.
ಈ ಬಗ್ಗೆ ನ್ಯೂಯಾರ್ಕ್ ನಿಂದ ಪತ್ರಿಕಾ ಪ್ರಕಟಣೆ ನೀಡಿರುವ ಮೆಹ್ತಾ, ಈ ಸಮಯ ಸೂಕ್ತವಾದುದಲ್ಲ, ಹೀಗಾಗಿ ಪದ್ಮ ಪ್ರಶಸ್ತಿಯನ್ನು ಸ್ವೀಕರಿಸಲಾರೆ ಎಂದು ತಿಳಿಸಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಶಸ್ತಿ ಸ್ವೀಕರಿಸಿದರೆ ಅಪಾರ್ಥಕ್ಕೆ ಎಡೆ ಮಾಡಿಕೊಡಲಿದೆ ಎಂದು ಮೆಹ್ತಾ ತಿಳಿಸಿದ್ದಾರೆ.
ಭಾರತ ಸರ್ಕಾರ ನನ್ನ ಗುರುತಿಸಿರುವುದಕ್ಕೆ ವಿನಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ..ಅಲ್ಲದೇ ನಾನು ಪದ್ಮಶ್ರೀ ಪ್ರಶಸ್ತಿಗೆ ಯೋಗ್ಯಳೇ ಎಂಬುದನ್ನು ಆಲೋಚಿಸುವಂತೆ ಮಾಡಿದೆ. ಆದರೆ ನಾನು ತುಂಬಾ ವಿಷಾದ ವ್ಯಕ್ತಪಡಿಸುತ್ತಿದ್ದೇನೆ, ಯಾಕೆಂದರೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ನಿಟ್ಟಿನಲ್ಲಿ ಪ್ರಶಸ್ತಿ ಸ್ವೀಕರಿಸಲು ಇದು ಸೂಕ್ತ ಕಾಲ ಅಲ್ಲ. ಹೀಗಾಗಿ ಸರ್ಕಾರಕ್ಕೂ, ನನಗೂ ಮುಜುಗರ ಉಂಟು ಮಾಡಲು ಕಾರಣವಾಗಿದ್ದಕ್ಕೆ ವಿಷಾದಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೀತಾ ಮೆಹ್ತಾ ಒಡಿಶಾದ ಮಾಜಿ ಸಿಎಂ, ದಿವಂಗತ ಬಿಜು ಪಟ್ನಾಯಕ್ ಅವರ ಪುತ್ರಿ. ಹಾಲಿ ಬಿಜೆಡಿ ವರಿಷ್ಠ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಹೋದರಿ, ಅಮೆರಿಕದ ನಿವಾಸಿಯಾಗಿರುವ ಮೆಹ್ತಾ ಖ್ಯಾತ ಲೇಖಕಿಯಾಗಿದ್ದಾರೆ. 14 ಪ್ರಮುಖ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿದ್ದರು. ಗೀತಾ ಮೆಹ್ತಾ ಅವರ ಪುಸ್ತಕ 26 ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿದೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಗೀತಾ ಮೆಹ್ತಾ ಹೆಸರೂ ಕೂಡಾ ಒಂದಾಗಿದೆ.
Odisha CM Naveen Patnaik’s sister Gita Mehta declines to accept Padma Shri, says timing of the award may be misconstrued