ನಟಿ ಭಾನುಪ್ರಿಯಾ ವಿರುದ್ಧ ಕಿರುಕುಳ ಆರೋಪ

ಚೆನ್ನೈ: ನಟಿ ಭಾನುಪ್ರಿಯಾ ವಿರುದ್ಧ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮಹಿಳೆಯೊಬ್ಬರು ಸಮಲ್‍ಕೋಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮನೆಕೆಲಸಕ್ಕಾಗಿ ತನ್ನ 14 ವರ್ಷದ ಮಗಳನ್ನು ಚೆನ್ನೈಗೆ ಕರೆದೊಯ್ದು ಕಿರುಕುಳ ನೀಡಿದ್ದಾಗಿ ದೂರು ನೀಡಿರುವ ಮಹಿಳೆ ಆರೋಪಿಸಿದ್ದಾರೆ.

ಚೆನ್ನೈನಲ್ಲಿರುವ ಭಾನುಪ್ರಿಯಾ ನಿವಾಸದಲ್ಲಿ 14 ವರ್ಷದ ಬಾಲಕಿ ಮನೆಗೆಲಸ ಮಾಡುತ್ತಿದ್ದಾರೆ. ಭಾನುಪ್ರಿಯಾ ಸಹೋದರ ಗೋಪಾಲ ಕೃಷ್ಣ ಎಂಬುವವರು ಆ ಬಾಲಕಿಗೆ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದೆ. ಅನಾಮಧೇಯ ಕರೆಯ ಮೂಲಕ ತಮಗೆ ಈ ಸಂಗತಿ ಗೊತ್ತಾಗಿದ್ದಾಗಿ ಬಾಲಕಿಯ ತಾಯಿ ತಿಳಿಸಿದ್ದಾರೆ.

ಮಕ್ಕಳ ಕ್ಷೇಮಾಭಿವೃದ್ಧಿ ಸಂಘಟನೆಗಳ ಮೂಲಕ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯಿದೆಯ ಪ್ರಕಾರ 14 ವರ್ಷದ ಒಳಗಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ಬಳಸಿಕೊಂಡರೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 50,000ದವರೆಗೂ ದಂಡ ವಿಧಿಸಲಾಗುತ್ತದೆ. ಅಪ್ರಾಪ್ತ ಬಾಲಕಿಯನ್ನು ಕೆಲಸಕ್ಕೆ ಕಳುಹಿಸಿದ ಪೋಷಕರೂ ಸಹ ಶಿಕ್ಷಾರ್ಹರಾಗುತ್ತಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಭಾನುಪ್ರಿಯಾ ಬಾಲಕಿಯ ವಯಸ್ಸು ನನಗೆ ಗೊತ್ತಿರಲಿಲ್ಲ ಎಂದಿದ್ದಾರೆ. ಬಳಿಕ ಬಾಲಕಿಯನ್ನು ಕರೆದೊಯ್ದು ದೂರು ನೀಡಿರುವ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾಗಿ ಮೂಲಗಳು ತಿಳಿಸಿವೆ.

Actress Bhanupriya Accused Of Harassing 14-Year-Old Domestic Help

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ