ಬೆಂಗಳೂರು, ಜ.25- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದಂತೆ ದೇಶಕ್ಕೆ ಅಚ್ಚೇದಿನ್ ಬರಲಿಲ್ಲ. ಬದಲಾಗಿ ದುರ್ಗತಿ ಬಂದಿದೆ.ಇದು ಸರಿ ಹೋಗಿ ಅಚ್ಚೇದಿನ್ ಬರಬೇಕಾದರೆ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದರು.
ಪಕ್ಷದ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ನಡೆದ ಸಮೀಕ್ಷೆಯಲ್ಲಿ ಅತಂತ್ರ ಸಂಸತ್ ನಿರ್ಮಾಣವಾಗುವ ಮುನ್ಸೂಚನೆ ಸಿಕ್ಕಿದೆ.ಬಹುಶಃ ಆ ಸಮೀಕ್ಷೆ ಕಳೆದ ಡಿಸೆಂಬರ್‍ನಲ್ಲಿ ನಡೆದಿರಬಹುದು. ಆಗಲೇ ಮೋದಿ ಜನಪ್ರಿಯತೆ ಕುಸಿದಿತ್ತು.ಚುನಾವಣೆಯ ಇನ್ನಷ್ಟು ತಿಂಗಳು ಬಾಕಿ ಇದ್ದು, ಅಷ್ಟೊತ್ತಿಗೆ ಮೋದಿಯವರ ಜನಪ್ರಿಯತೆ ಮತ್ತಷ್ಟು ಕುಸಿದು ಬಿಜೆಪಿ ನೆಲಕಚ್ಚಲಿದೆ ಎಂದು ಹೇಳಿದರು.
ಕಾಂಗ್ರೆಸ್ ಮಿತ್ರ ಪಕ್ಷಗಳಿಗೆ ಹೆಚ್ಚು ಸ್ಥಾನ ಲಭಿಸಲಿದೆ. ಮೋದಿ ಅಧಿಕಾರಕ್ಕೆ ಬಂದಾಗ ಒಳ್ಳೆಯ (ಅಚ್ಚೇ) ದಿನಗಳು ಬರಲಿವೆ ಎಂದು ಹೇಳಿದ್ದರು. ಆದರೆ, ದುರ್ದಿನಗಳು ಎದುರಾದವು.ಮೋದಿ ಅವರ ಆಡಳಿತದಲ್ಲಿ ಕೇವಲ ಆಡಂಬರ, ಸ್ವ ಪ್ರತಿಷ್ಠೆಯನ್ನೇ ನೋಡಬೇಕಾಗಿದೆ.ಒಳ್ಳೆಯ ದಿನಗಳಿಗಾಗಿ ಜನ ಕಾದು ಕಾದು ಬೇಸರಗೊಂಡಿದ್ದಾರೆ.ಮೋದಿಯವರನ್ನು ಬೆಂಬಲಿಸಿದವರೇ ಭ್ರಮನಿರಸನಗೊಂಡು ಈಗ ವಿರೋಧಿಸಲಾರಂಭಿಸಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್‍ನ ಯಾವ ಶಾಸಕರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಶಾಸಕಾಂಗ ಸಭೆಗೆ ಗೈರು ಹಾಜರಾಗಿದ್ದ ನಾಲ್ಕು ಮಂದಿ ಶಾಸಕರಿಗೆ ನೋಟಿಸ್ ನೀಡಲಾಗಿದೆ.ಅವರು ಉತ್ತರಿಸಿದ್ದಾರೆ.ನಾವು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಪತ್ರದಲ್ಲಿ ಸ್ಪಷ್ಟವಾಗಿ ಉತ್ತರಿಸಿದ್ದಾರೆ ಇದು ಸ್ವಾಗತಾರ್ಹ.
ಆದರೆ, ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ.ಯಾರೇ ಆದರೂ ಪಕ್ಷದ ಶಿಸ್ತನ್ನು ಕಾಪಾಡಬೇಕು.ಇಲ್ಲವಾದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸುವುದು ಖಚಿತ.ನಾಲ್ವರು ಶಾಸಕರು ಬರೆದಿರುವ ಪತ್ರ ಉತ್ತರವನ್ನು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪರಿಶೀಲಿಸುತ್ತಾರೆ. ನಾನು ಕೂಡ ಅವರೊಂದಿಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.