ಬೆಂಗಳೂರು: ದೊಡ್ಡ ಹಾಲ್. ಅಲ್ಲಿ ಹತ್ತಾರು ಸೀಟುಗಳು. ಅಚ್ಚರಿ ಎಂದರೆ, ಅಲ್ಲಿ ಆಪರೇಷನ್ ಕಮಲ ಮಾಡ್ತೀವಿ ಎಂದು ಹೇಳಿಕೊಂಡು ಓಡಾಡುತ್ತಿದ್ದ ಬಿಜೆಪಿ ನಾಯಕರಿದ್ದರು. ನೀವು ಆಪರೇಷನ್ ಕಮಲ ಮಾಡಿದ್ರೆ ನಾವೇನು ಕೈಕಟ್ಟಿ ಕೂರಲ್ಲ. ನಾವು ಆಪರೇಷನ್ ಹಸ್ತ ಮಾಡ್ತೀವಿ ಎನ್ನುವ ಕಾಂಗ್ರೆಸ್ ನಾಯಕರಿದ್ದರು. ನಮ್ಮ ಪಕ್ಷದವರು ಯಾವಾಗಲೂ ನಮ್ಮ ಜೊತೆಯೇ ಇರುತ್ತಾರೆ ಎಂದು ಹೇಳೀದ್ದ ಜೆಡಿಎಸ್ ನಾಯಕರಿದ್ದರು. ಹೀಗೊಂದು ದೃಶ್ಯ ಕಂಡು ಬಂದಿದ್ದು ಬೆಂಗಳೂರಿನ ಒರಾಯನ್ ಮಾಲ್ನಲ್ಲಿರುವ ಪಿವಿಆರ್ ಥಿಯೇಟರ್ನಲ್ಲಿ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್ ನಟನೆಯ ‘ಸೀತಾರಾಮ ಕಲ್ಯಾಣ’ ಚಿತ್ರ ನಾಳೆ (ಜ.25) ವಿಶ್ವಾದ್ಯಂತ ಬಿಡುಗಡೆ ಆಗುತ್ತಿದೆ. ದೇಶಾದ್ಯಂತ 300 ಚಿತ್ರಮಂದಿರಗಳಲ್ಲಿ ‘ಸೀತಾರಾಮ’ ತೆರೆಗೆ ಬರುತ್ತಿದೆ. ಇಂದು ಸರ್ವಪಕ್ಷದ ಶಾಸಕರಿಗೋಸ್ಕರ ಪ್ರಿಮೀಯರ್ ಶೋ ಏರ್ಪಡಿಸಲಾಗಿತ್ತು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪಕ್ಷಭೇದ ಮರೆತು ಸಿನಿಮಾ ವೀಕ್ಷಿಸಿದರು.
ಸದ್ಯ ರಾಜ್ಯದಲ್ಲಿ ನಾನಾ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿ ನಾಯಕರು ಆಪರೇಷನ್ ಕಮಲ ಮಾಡುತ್ತೇವೆ ಎಂದು ಹರಿಯಾಣದ ಗುರುಗ್ರಾಮದ ರೆಸಾರ್ಟ್ನಲ್ಲಿ ಕೆಲ ದಿನಗಳ ಕಾಲ ಠಿಕಾಣಿ ಹೂಡಿದ್ದರು. ಈ ನಡುವೆ ಕಾಂಗ್ರೆಸ್ನ ರಮೇಶ್ ಜಾರಕಿಹೊಳಿ ರೆಬೆಲ್ ಆಗಿದ್ದರು. ಈ ಬೆಳವಣಿಗೆ ನಂತರ ಕಾಂಗ್ರೆಸ್ನಿಂದ ರೆಸಾರ್ಟ್ ರಾಜಕೀಯ ಆರಂಭಿಸಿತ್ತು. ರಾಜಕೀಯ ಗುದ್ದಾಟಕ್ಕೆ ತಾತ್ಕಾಲಿಕ ವಿರಾಮ ನೀಡಿ, ಎಲ್ಲ ಪಕ್ಷದ ನಾಯಕರು ಸಿನಿಮಾ ವೀಕ್ಷಿಸಿ ಸ್ವಲ್ಪ ರಿಲೀಫ್ ಆಗಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಾದ ಕೆ.ಎಸ್. ಈಶ್ವರಪ್ಪ, ಸಚಿವ ಆರ್.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ಜಮೀರ್ ಅಹಮದ್ ಖಾನ್ ಮುಂತಾದವರು ಚಿತ್ರ ವೀಕ್ಷಿಸಿದ್ದಾರೆ.
‘ಸೀತಾರಾಮ ಕಲ್ಯಾಣ’ದಲ್ಲಿ ನಿಖಿಲ್ಗೆ ಜೊತೆಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ‘ಅಂಜನೀ ಪುತ್ರ’ ಖ್ಯಾತಿಯ ಎ. ಹರ್ಷ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ತೆಲುಗು ನಟ ಶರತ್ ಕುಮಾರ್, ರವಿಶಂಕರ್, ಗಿರಿಜಾ ಲೋಕೇಶ್, ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕುಮಾರಸ್ವಾಮಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದೇಶಾದ್ಯಂತ 400 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.