ಬೆಂಗಳೂರು, ಜ.25-ಬಜೆಟ್ ಪೂರ್ವ ಸಿದ್ಧತೆ ಹಿನ್ನೆಲೆಯಲ್ಲಿ ರೈತರ ಸಂಘ-ಸಂಸ್ಥೆ ಮತ್ತು ರೈತ ಮುಖಂಡರೊಂದಿಗೆ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದರು.
ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಸಹಕಾರ ಸಚಿವ ಬಂಡಪ್ಪ ಕಾಶಂಪುರ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ರೈತ ಸಂಘಟನೆಗಳ ಹಲವಾರು ಪ್ರಮುಖರು ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡಿದರು.
ರೈತರ ಕೃಷಿ ಸಾಲ ಮನ್ನಾ ಯೋಜನೆಯ ಷರತ್ತುಗಳನ್ನು ಕೈ ಬಿಡಬೇಕು. ಕಬ್ಬಿಗೆ ಎಸ್ಎಪಿ ದರ ನಿಗದಿಪಡಿಸಬೇಕು.ಬೆಳೆ ವಿಮೆ ಕಂತನ್ನು ಸರ್ಕಾರವೇ ತುಂಬಬೇಕು.ಆನ್ಲೈನ್ ಟ್ರೇಡಿಂಗ್ ವ್ಯಾಪಾರದ ಮಾರುಕಟ್ಟೆಯನ್ನು ವಿಸ್ತರಣೆ ಮಾಡಬೇಕು.ಮೇಕೆದಾಟು ಯೋಜನೆ ಕಾಲಮಿತಿಯನ್ನು ಪೂರ್ಣಗೊಳಿಸಬೇಕು.ಕಳಸಾಬಂಡೂರಿ ಯೋಜನೆ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು.ಪ್ರಕೃತಿ ವಿಕೋಪ ನಿಧಿ ಆರಂಭಿಸಬೇಕು.ಬೆಳೆ ನಷ್ಟ ಪರಿಹಾರಕ್ಕಾಗಿ ಕ್ರಮ ವಹಿಸಬೇಕು.ರೈತರ ಆಯೋಗ ರಚನೆ ಮಾಡಬೇಕು. ತುಂತುರು ಹನಿ ನೀರಾವರಿಗೆ ಶೇ.100ರಷ್ಟು ಸಹಾಯಧನ ಒದಗಿಸಬೇಕು. ರೈತರಿಗೆ ಮಾಸಾಶನ ನೀಡಬೇಕು. ಸಂಚಾರಿ ಪ್ರಾಥಮಿಕ ಆರೋಗಳ ವ್ಯವಸ್ಥೆ ಕಲ್ಪಿಸಬೇಕು.ಪಶುವೈದ್ಯ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು.ಕೃಷಿ ಪಾಠಗಳನ್ನು ಶಿಕ್ಷಣದಲ್ಲಿ ಅಳವಡಿಸಬೇಕು.ಸ್ವದೇಶಿ ಬೀಜ ಬ್ಯಾಂಕ್ ಸ್ಥಾಪನೆ, ಹಗಲು ವೇಳೆ ಕೃಷಿಗಾಗಿ ತ್ರಿಫೇಸ್ ವಿದ್ಯುತ್ ಒದಗಿಸುವುದು ಸೇರಿದಂತೆ ಇನ್ನಿತರ ಹತ್ತು ಹಲವು ಬೇಡಿಕೆಗಳನ್ನು ರೈತ ಮುಖಂಡರು ಮುಖ್ಯಮಂತ್ರಿಗಳ ಮುಂದಿಟ್ಟರು.