ಬೆಂಗಳೂರು, ಜ.25- ಚುನಾವಣೆಯಲ್ಲಿ ಎಲ್ಲರೂ ಪಾಲ್ಗೊಂಡು ಶೇ.100ಕ್ಕೆ 100ರಷ್ಟ ಮತದಾನ ಮಾಡಿದಾಗ ಒಳ್ಳೆಯ ಅಭ್ಯರ್ಥಿಗಳು ಆಯ್ಕೆಯಾಗಲು ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಹೇಳಿದರು.
ರಾಜ್ಯ ಮಹಿಳಾ ಕಾಂಗ್ರೆಸ್ವತಿಯಿಂದ ಕೆಪಿಸಿಸಿ ಕಚೇರಿ ಎದುರು ಆಯೋಜಿಸಲಾಗಿದ್ದ ಕಡ್ಡಾಯ ಮತದಾನ ಜಾಗೃತಿ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಚುನಾವಣೆ ಬಹಳ ಪ್ರಮುಖವಾದ ಘಟ್ಟ. ಇದರಲ್ಲಿ ಎಲ್ಲರೂ ಪಾಲ್ಗೊಳ್ಳುವುದು ಮುಖ್ಯ.ನೂರಕ್ಕೆ ನೂರರಷ್ಟು ಮತದಾನ ಆಗಬೇಕು.ಎಲ್ಲರೂ ಮತದಾನ ಮಾಡಿದಾಗ ಮಾತ್ರ ಒಳ್ಳೆಯ ಅಭ್ಯರ್ಥಿ ಆಯ್ಕೆ ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ದೇಶದಲ್ಲಿ ಕಾಂಗ್ರೆಸ್ನ ಅಲೆ ಸೃಷ್ಟಿಯಾಗಿದೆ.ಪ್ರಿಯಾಂಕಾಗಾಂಧಿ ಪಕ್ಷದ ಅಧ್ಯಕ್ಷರಾದ ನಂತರ ಆ ಅಲೆ ಸುನಾಮಿಯಾಗಿ ಪರಿವರ್ತನೆಯಾಗಲಿದೆ.ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ.ರಾಹುಲ್ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.
ಚುನಾವಣೆಗಳೇ ಪ್ರಜಾಪ್ರಭುತ್ವದ ಬುನಾದಿ.ದೇಶದಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದೆ.ಅವರು ಅದನ್ನು ಚಲಾಯಿಸಬೇಕು.ತಮ್ಮ ಅನಿಸಿಕೆಗೆ ಪೂರಕವಾದ ಅಭ್ಯರ್ಥಿಗೆ ಮತ ಹಾಕುವ ಮೂಲಕ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕು ಎಂದು ಹೇಳಿದರು.
ಮನೆಯಲ್ಲಿರುವ ಮಹಿಳೆಯರು ಮತದಾನದ ಬಗ್ಗೆ ಅಕ್ಕ-ಪಕ್ಕದವರಿಗೆ ಜಾಗೃತಿ ಮೂಡಿಸಬೇಕು.ತಾವು ಖುದ್ದಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಉಳಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ನ ಪದಾಧಿಕಾರಿಗಳು ಕೆಪಿಸಿಸಿ ಬಳಿ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇರುವ ನಾವು ನಿರ್ಭೀತ ಮತ್ತು ಶಾಂತಿಯುತ ಮತದಾನಕ್ಕೆ ಸಹಕರಿಸುತ್ತೇವೆ. ಜಾತಿ, ಧರ್ಮ, ಸೇರಿದಂತೆ ಯಾವುದೇ ಪ್ರಲೋಭನೆಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತದಾನ ಮಾಡುತ್ತೇವೆ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕೆಪಿಸಿಸಿ ಕಚೇರಿಯಿಂದ ಇಂಡಿಯನ್ ಎಕ್ಸ್ಪ್ರೆಸ್ವರೆಗೂ ಜನಜಾಗೃತಿ ರ್ಯಾಲಿಯನ್ನು ಆಯೋಜಿಸಲಾಗಿತ್ತು.ಇಂಡಿಯನ್ ಎಕ್ಸ್ಪ್ರೆಸ್ ವೃತ್ತದ ಬಳಿ ಸಾರ್ವಜನಿಕರಿಗೆ ಪೆನ್ನುಗಳನ್ನು ನೀಡುವ ಮೂಲಕ ಅರಿವು ಮೂಡಿಸಲಾಯಿತು.
ಎಐಸಿಸಿ ಪ್ರಧಾನಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಶಾಸಕ ರೋಷನ್ಬೇಗ್, ಮಹಿಳಾ ಕಾಂಗ್ರೆಸ್ನ ಪದಾಧಿಕಾರಿಗಳು ಹಾಜರಿದ್ದರು.