ಬೆಂಗಳೂರು, ಜ.25- ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್ ನಿನ್ನೆಯಿಂದಲೂ ಮಹತ್ವದ ಸಭೆಗಳನ್ನು ನಡೆಸುತ್ತಿದೆ.
ಎಐಸಿಸಿ ಆದೇಶದಂತೆ ನಿನ್ನೆಯಿಂದಲೂ ಸರಣಿ ಸಭೆಗಳು ಆರಂಭಗೊಂಡಿದ್ದು, ನಿನ್ನೆ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಲೋಕಸಭಾ ಕ್ಷೇತ್ರಗಳ ಪ್ರಮುಖರ ಜತೆ ಸಭೆ ನಡೆಸಿದರು.
ಇಂದು ಎಐಸಿಸಿ ಕಾರ್ಯದರ್ಶಿಗಳಾದ ಯಶೋಮತಿ ಠಾಕೂರ್, ವಿಷ್ಣುನಾದ್ ಅವರು ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಕ್ಷೇತ್ರಗಳ ಪ್ರಮುಖರ ಜತೆ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಮುಂಚೂಣಿ ಘಟಕಗಳ ಪ್ರಮುಖರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಇದೇ ವೇಳೆ ಜೆಡಿಎಸ್ ಜತೆಗಿನ ಮೈತ್ರಿಯ ಸಂಬಂಧವಾಗಿಯೂ ಅಭಿಪ್ರಾಯಗಳನ್ನು ಕ್ರೂಢೀಕರಿಸಲಾಗಿದೆ.ಸಭೆಯ ಬಗ್ಗೆ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರು, ಎಐಸಿಸಿ ವರಿಷ್ಠರು ನೇರವಾಗಿ ಕಾರ್ಯಕರ್ತರ ಜತೆ ಚರ್ಚಿಸುತ್ತಿದ್ದು, ಆ ವರದಿ ಹೈಕಮಾಂಡ್ಗೆ ಸಲ್ಲಿಕೆಯಾಗಲಿದೆ. ಹೈಕಮಾಂಡ್ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಸಂಬಂಧ ನಿರ್ಧಾರ ತೆಗೆದುಕೊಳ್ಳಲಿದೆ. ಇದರಲ್ಲಿ ಕೆಪಿಸಿಸಿಯ ಹಸ್ತಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.