ಬೆಂಗಳೂರು, ಜ.25- ಲೋಕಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳ ಜತೆ ಕಾಂಗ್ರೆಸ್ ಹೈಕಮಾಂಡ್ ಇಂದು ಸುದೀರ್ಘ ಸಮಾಲೋಚನೆ ನಡೆಸಿತು.
ಕೆಪಿಸಿಸಿ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಬೆಂಗಳೂರು ಕೇಂದ್ರ, ಉತ್ತರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಎಐಸಿಸಿ ಕಾರ್ಯದರ್ಶಿ ಯಶೋಮತಿ ಠಾಕೂರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ಖಂಡ್ರೆ ಅವರ ಮುಂದೆ ಆಕಾಂಕ್ಷಿಗಳು ಹಾಜರಾಗಿ ತಮಗೆ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಆಕಾಂಕ್ಷಿಗಳು ಕಡಿಮೆ ಇದ್ದರೆ, ಉತ್ತರ ಕ್ಷೇತ್ರದ ಬಗ್ಗೆ ಕಾಂಗ್ರೆಸ್ನಲ್ಲಿ ನಿರಾಸಕ್ತಿ ಇದೆ.ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.ಅಧಿಕೃತವಾಗಿ ಈವರೆಗೂ ಸುಮಾರು 9ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಶಾಸಕ ರೋಷನ್ಬೇಗ್, ರಾಜ್ಯಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ, ಎಐಸಿಸಿ ಕಾರ್ಯದರ್ಶಿ ಸಲೀಂ ಅಹಮ್ಮದ್, ಮಾಜಿ ಸಚಿವ ಜೆ.ಅಲೆಕ್ಸಾಂಡರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯ್ಯದ್ ಅಹಮ್ಮದ್, ಕಾರ್ಮಿಕ ಘಟಕದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ, ಜಾಫರ್ ಶರೀಫ್ ಅವರ ಮೊಮ್ಮಗ ರೆಹಮಾನ್ ಶರೀಫ್, ಯುವ ಮುಖಂಡರಾದ ಮನೋಹರ್ ಮತ್ತಿತರರು ಆಕಾಂಕ್ಷಿಗಳಾಗಿದ್ದಾರೆ.
ಇದೆಲ್ಲದರ ಹೊರತಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲು ಮುಂದಾಗಿದ್ದಾರೆ ಎಂಬ ವದಂತಿಗಳು ಹಬ್ಬಿವೆ.
ಇನ್ನೊಂದೆಡೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಹೊರತಾಗಿಯೂ ಬೆಂಗಳೂರು ಉತ್ತರ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ರಾಜ್ಕುಮಾರ್, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಸಂಸದ ನಾರಾಯಣಸ್ವಾಮಿ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದರೆ.
ಕೇಂದ್ರ ಸಚಿವ ಅನಂತ್ಕುಮಾರ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಆಕಾಂಕ್ಷಿಗಳ ಸಂಖ್ಯೆ ಕಡಿಮೆ ಇದೆ.ಮಾಜಿ ಶಾಸಕ ಪ್ರಿಯಾ ಕೃಷ್ಣ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಬೇಕೆಂದು ಕಾಂಗ್ರೆಸ್ ಅಭಿಮಾನಿಗಳಿಂದ ಮಾತುಗಳು ಕೇಳಿ ಬರುತ್ತಿದೆ.ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರೇ ಈ ಕ್ಷೇತ್ರದಿಂದ ಸ್ಪರ್ಧಿಸಿ ರಾಷ್ಟ್ರ ರಾಜಕಾರಣದತ್ತ ಮುಖ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಮಾಜಿ ಸಚಿವ ಪೆÇ್ರ.ಬಿ.ಕೆ.ಚಂದ್ರಶೇಖರ್ ಮತ್ತಿತರರು ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಇಂದು ಕೆಲವು ಆಕಾಂಕ್ಷಿಗಳ ಜತೆ ಮುಖಾಮುಖಿ ಚರ್ಚೆ ನಡೆಸಿದೆ.