ನವದೆಹಲಿ: ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಗಾಂಧಿ ನೇಮಕ ಹಿನ್ನಲೆಯಲ್ಲಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರತಿಕ್ರಿಯೆ ನೀಡಿದ್ದು, ಪ್ರಿಯಾಂಕ ಒಳ್ಳೆಯ ಮಹಿಳೆ ಆದರೆ, ರಾಹುಲ್ ಒಬ್ಬರೇ ರಾಜಕೀಯ ನಿಭಾಯಿಸಲು ಆಗಲ್ಲ ಎನ್ನುವುದನ್ನ ಒಪ್ಪಿಕೊಂಡಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುಮಿತ್ರಾ ಮಹಾಜನ್, ರಾಹುಲ್ ಗಾಂಧಿಗೆ ಏಕಾಂಗಿಯಾಗಿ ರಾಜಕೀಯವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರ ಸೋದರಿ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬಂದಿದ್ದಾರೆ ಎಂದರು.
ಕಾಂಗ್ರೆಸ್‌ನ ಕುಟುಂಬ ರಾಜಕಾರಣದಲ್ಲಿ ಮಧ್ಯೆ ಪ್ರವೇಶಿಸಲು ಬಯಸುವುದಿಲ್ಲ. ಇದು ಅವರ ಸ್ವಂತ ವಿಷಯ. ಆದರೆ ಖಂಡಿತವಾಗಿಯೂ ಒಂದನ್ನು ಹೇಳುತ್ತೇನೆ, ಯಾರಿಗೆ ನಾಯಕತ್ವದ ಸಾಮರ್ಥ್ಯವಿದೆಯೋ ಅವರಿಗೆ ರಾಜಕೀಯವಾಗಿ ಮುಂದೆ ಬರಲು ಅವಕಾಶವನ್ನು ನೀಡಬೇಕು ಎಂದಿರುವ ಅವರು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಪಶ್ಚಿಮ ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಮಧ್ಯಪ್ರದೇಶದ ಗುಣ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಿಂಧ್ಯಾ ಅವರಿಗೆ ಪ್ರಮುಖ ಜವಾಬ್ದಾರಿಯನ್ನು ನೀಡಲಾಗಿದೆ. ನಾನು ಅವರನ್ನು ಅಭಿನಂದಿಸುತ್ತೇನೆ ಏಕೆಂದರೆ ಅವರ ಆಯ್ಕೆಯು ಮಧ್ಯಪ್ರದೇಶದ ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದ್ದಾರೆ.
Rahul Gandhi couldn’t manage alone, sought sister’s help: Sumitra Mahajan