ಇಂಡಿಯಾ ಟುಡೇ ಸಮೀಕ್ಷೆ: ಉತ್ತರಪ್ರದೇಶದಲ್ಲಿ ಎಸ್​​ಪಿ-ಬಿಎಸ್​​ಪಿಗೆ ಭರ್ಜರಿ ಜಯಭೇರಿ

ನವದೆಹಲಿ2019ರ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿಯಿದೆ. ಈ ನಡುವೇ ಕೇಂದ್ರದಲ್ಲಿ ಗದ್ದುಗೆ ಹಿಡಿಯಲು ನಿರ್ಣಾಯಕ ಪಾತ್ರವಹಿಸುವ ಉತ್ತರಪ್ರದೇಶದ ಮೇಲೆ ದೆಹಲಿ ನಾಯಕರ ಕಣ್ಣು ನೆಟ್ಟಿದೆ. ಹೀಗಾಗಿ ಇಲ್ಲಿನ ಚುನಾವಣೆ ಯಾರು ಗೆಲ್ಲಲ್ಲಿದ್ದಾರೆ? ಎಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಈ ಬೆನ್ನಲ್ಲೇ ಇಂಡಿಯಾ ಟುಡೇ ‘ ಮೂಡ್ ಆಫ್ ದಿ ನೇಶನ್’ ಸರ್ವೇ ನಡೆಸಿದ್ದು, ಉತ್ತಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಎನ್​​ಡಿಎ ಮೈತ್ರಿಕೂಟಕ್ಕೆ ಆಘಾತಕಾರಿ ಸುದ್ದಿ ಕೇಳಿಬಂದಿದೆ.
ಉತ್ತರಪ್ರದೇಶ ಅತ್ಯಂತ ಹೆಚ್ಚು ಲೋಕಸಭಾ ಕ್ಷೇತ್ರವನ್ನ ಹೊಂದಿದೆ. ಒಟ್ಟು 80 ಕ್ಷೇತ್ರವನ್ನ ಹೊಂದಿರುವ ಇಲ್ಲಿ ಕಳೆದ ಬಾರಿ 2014ರಲ್ಲಿ ಎನ್​​ಡಿಎ ಮೈತ್ರಿಕೂಟ ಬರೋಬ್ಬರಿ ಒಟ್ಟು 73 ಕ್ಷೇತ್ರವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆದರೆ ಈ ಬಾರಿ ಎನ್​ಡಿಎ ಕೂಟಕ್ಕೆ ಮಹಾಘಟಬಂಧನ್ ದೊಡ್ಡ ಏಟು ಕೊಡಲಿದೆ? ಅಂತಾ ಸಮೀಕ್ಷೆ ಹೇಳಿದೆ. ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ ಎಸ್​​ಪಿ-ಬಿಎಸ್​​ಪಿ ಮೈತ್ರಿಕೂಟವೇ ಮೇಲುಗೈ ಸಾಧಿಸಲಿದೆ ಎಂದು ತಿಳಿದು ಬಂದಿದೆ.

ಸದ್ಯದ ಇಂಡಿಯಾ ಟುಡೇ ‘ ಮೂಡ್ ಆಫ್ ದಿ ನೇಶನ್’ ಸರ್ವೇ ಪ್ರಕಾರ ಉತ್ತರಪ್ರದೇಶದಲ್ಲಿ ಬಿಜೆಪಿ ಕೇವಲ 18 ಸೀಟು ಗೆಲ್ಲಲಿದೆ ಎನ್ನಲಾಗಿದೆ. ಹಾಗೆಯೇ ಮಾಜಿ ಸಿಎಂ ಮಾಯಾವತಿ ನೇತೃತ್ವದ ಬಿಎಸ್​​ಪಿ ಮತ್ತು ಸಮಾಜವಾದಿ ಪಕ್ಷದ ಮೈತ್ರಿಕೂಟ ಬರೋಬ್ಬರಿ 58 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ ಅಂತಾ ಸಮೀಕ್ಷೆ ಹೇಳಿದೆ. ಅಲ್ಲದೇ ಕಾಂಗ್ರೆಸ್​​ 4 ಸೀಟುಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಕಾಂಗ್ರೆಸ್​​ ಕೂಡ ಎಸ್​​ಪಿ-ಬಿಎಸ್​​ಪಿ ಮೈತ್ರಿಕೂಟದ ಭಾಗವಾಗಿದ್ದರೇ, ಬಿಜೆಪಿ ಹೀನಾಯವಾಗಿ ಸೋಲುತ್ತಿತ್ತು. ಈ ಮೂರು ಪಕ್ಷಗಳ ಮೈತ್ರಿಕೂಟ ಸ್ಪರ್ಧಿಸಿದರೇ, ಬಿಜೆಪಿ ಕೇವಲ ಐದು ಸೀಟುಗಳನ್ನು ಗೆಲ್ಲುತ್ತಿತ್ತು ಎಂದು ಸಮೀಕ್ಷೆ ಹೇಳಿದೆ. ಹೀಗಾಗಿ ಚುನಾವಣೆಗೆ ಇನ್ನು ಕೆಲವು ತಿಂಗಳು ಬಾಕಿ ಇರುವಾಗ ಕೇಂದ್ರಕ್ಕೆ ಈ ಸರ್ವೆ ಎಚ್ಚರಿಕೆ ಗಂಟೆಯಾಗಿದ್ದು, ಸರ್ಕಾರದ ಬಗ್ಗೆ ಜನರ ಭಾವನೆಗಳನ್ನು ಈ ಸರ್ವೆಯಲ್ಲಿ ಕಟ್ಟಿಕೊಡಲಾಗಿದೆ ಎನ್ನಬಹುದು.
ಈ ಹಿಂದೇ ಇದೇ ಇಂಡಿಯಾ ಟುಡೇ ನಡೆಸಿದ್ದ ಸರ್ವೇಯಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅತಂತ್ರ ಸನ್ನಿವೇಶ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ ಎಂದು ಬಿಂಬಿಸಿತ್ತು. ಈಗಲೇ ಚುನಾವಣೆ ನಡೆದರೆ ಬಿಜೆಪಿ ಕಳೆದ ಬಾರಿಗಿಂತ 50 ಕ್ಕಿಂತ ಹೆಚ್ಚು ಸ್ಥಾನ ಕಳೆದುಕೊಳ್ಳಲಿದೆ. ಕಾಂಗ್ರೆಸ್ 30 ಹೆಚ್ಚು ಸ್ಥಾನ ಪಡೆಯಬಹುದು ಎಂದು ಅಂದಾಜಿಸಲಾಗಿತ್ತು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಇತರೆ ಪಕ್ಷಗಳ ಬೆಂಬಲ ಅನಿವಾರ್ಯ ಎಂಬುದು ಸರ್ವೆಯಲ್ಲಿ ಕಂಡು ಬಂದಿತ್ತು. ಆದರೆ ಕಾಂಗ್ರೆಸ್ ಪರಿಸ್ಥಿತಿಗೆ ಹೋಲಿಸಿದರೆ ಬಿಜೆಪಿ ಅಧಿಕಾರ ಹಿಡಿಯುವುದು ಕಷ್ಟವಾಗಲಿಕ್ಕಿಲ್ಲ ಎಂದು ವಿಶ್ಲೇಷಿಸಲಾಗುತ್ತಿತ್ತು. ಆದರೆ, ಹಿಂದಿ ಭಾಷಾ ರಾಜ್ಯಗಳಲ್ಲಿ ಮಾತ್ರ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ ಎಂದೇ ಎಚ್ಚರಿಕೆ ಸಂದೇಶ ರವಾನಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ