ಎಂ.ಟೆಕ್ಸ್-2019 ಮತ್ತು ಟೂಲ್‍ಟೆಕ್ ಸಡಮಾವೇಶ ಉದ್ಘಾಟಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಜ.24- ರಾಜ್ಯ ಕೈಗಾರಿಕಾ ನೀತಿ ಅನ್ವಯ ರಾಜ್ಯದಲ್ಲಿ 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಹಾಗೂ 15 ಲಕ್ಷ ಉದ್ಯೋಗ ಅವಕಾಶ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಎಂ.ಟೆಕ್ಸ್-2019 ಮತ್ತು ಟೂಲ್‍ಟೆಕ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ 2014-19 ಕೈಗಾರಿಕಾ ನೀತಿಯಲ್ಲಿ ವಾರ್ಷಿಕ ಶೇ.12ರಷ್ಟು ಕೈಗಾರಿಕಾ ಪ್ರಗತಿ ಗುರಿಯನ್ನು ನಿರೀಕ್ಷಿಸಲಾಗಿದೆ. 2014-19ರ ರಾಜ್ಯ ಕೈಗಾರಿಕಾ ನೀತಿ ಅನ್ವಯ ವಾರ್ಷಿಕ ಶೇ.12ರಷ್ಟು ಪ್ರಗತಿ ಗುರಿಯನ್ನು ಹೊಂದಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಅತ್ಯಧಿಕ ಉದ್ಯೋಗ ಸೃಷ್ಟಿಸಿದ ದೇಶದ ಮೂರನೇ ರಾಜ್ಯವಾಗಿ ಕರ್ನಾಟಕ ಹೊರ ಹೊಮ್ಮಿದೆ ಎಂದು ಹೇಳಿದರು.

ಎರಡನೇ ದರ್ಜೆಯ 9 ಜಿಲ್ಲೆಗಳಲ್ಲಿ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ತುಮಕೂರು ಮಿಷಿನ್ ಟೂಲ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ.ಸುಮಾರು 500 ಎಕರೆ ಪ್ರದೇಶದಲ್ಲಿ ಈ ಪಾರ್ಕ್ ಸ್ಥಾಪನೆಯಾಗಲಿದೆ.ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ರಾಜ್ಯ ಅತ್ಯಂತ ಪ್ರಸಕ್ತ ಸ್ಥಳವಾಗಿದ್ದು, ರೋಬಿಟಿಕ್ಸ್ ತ್ರಿಡಿ ಪ್ರಿಂಟಿಂಗ್ ಸೇರಿದಂತೆ ವಿಫುಲ ಅವಕಾಶವಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತಾರವಾಗುತ್ತಿದ್ದು, ಕೈಗಾರಿಕೆಗೆ ಅನುಕೂಲವಾಗಲಿದೆ.ರಾಜ್ಯ ಸರ್ಕಾರದ ಏರೋಸ್ಪೇಸ್ ನೀತಿ ಅನ್ವಯ 12.5 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ವಿವಿಧ ವಲಯಗಳಲ್ಲಿ ಏರೋಸ್ಪೇಸ್ ಅಭಿವೃದ್ಧಿ ಪಡಿಸಲು ಚಿಂತನೆ ಮಾಡಲಾಗಿದೆ. ಕೈಗಾರಿಕಾಭಿವೃದ್ಧಿಯಲ್ಲಿ ರಾಜ್ಯ ಮೊದಲಿನಿಂದಲೂ ಮುಂಚೂಣಿಯಲ್ಲಿದ್ದು, ಪ್ರಗತಿಪರ ಚಿಂತನೆ ಹೊಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಐಎಂಟಿಎಂನ ಅಧ್ಯಕ್ಷ ಜಂಶಾದ್ ಎನ್.ಗೋದ್ರೇಜ್, ಎಸಿಎನ್‍ಎ ಅಧ್ಯಕ್ಷ ರಾಮ್ ವೆಂಕಟರಮಣಿ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ