ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಾಳೆ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿಯ ಮಹತ್ವದ ಸಭೆ ನಡೆಯಲಿದೆ. ಮೈತ್ರಿ ಸರ್ಕಾರವನ್ನ ಬೆಂಬಿಡದಂತೆ ಕಾಡುತ್ತಿರುವ ಆಪರೇಷನ್ ಕಮಲದ ಸಂಕಷ್ಟದ ನಡುವೆಯೂ ಮತ್ತೊಂದು ಬಜೆಟ್ ಮಂಡನೆಗೆ ಸಚಿವ ಸಂಪುಟ ತಯಾರಿ ನಡೆಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಚರ್ಚಿಸಲು ರಾಜ್ಯ ಸರ್ಕಾರದ ನಾಯಕರು ಪೂರ್ವಭಾವಿಯಾಗಿ ಗುರುವಾರ(ಜ.24) ಸಮನ್ವಯ ಸಮಿತಿ ಸಭೆ ನಡೆಸುತ್ತಿದ್ದಾರೆ. ಅಲ್ಲದೇ ಇಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆ ಸುತ್ತ ಮಹತ್ವದ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಸಮ್ಮಿಶ್ರ ಸರ್ಕಾರದ ನಾಯಕರು ರೆಸಾರ್ಟ್ ರಾಜಕಾರಣ ಹಾಗೂ ಆಪರೇಷನ್ ಕಮಲದ ಭೀತಿಯಿಂದ ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಂಡಿದ್ದಾರೆ. ಇದರಿಂದ ಸರ್ಕಾರಕ್ಕೆ ದೊಡ್ಡ ಯಡವಟ್ಟಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ನಡೆಯಬೇಕಿದ್ದ ವಿಧಾನಮಂಡಲ ಜಂಟಿ ಅಧಿವೇಶನಕ್ಕೆ ಯಾವುದೇ ತಯಾರಿ ನಡೆಸಿಕೊಂಡಿಲ್ಲ ಎನ್ನಲಾಗಿದೆ. ಹೀಗಾಗಿ ಇಲ್ಲಿ ಎದುರಾಗಬಹುದಾದ ಇಕ್ಕಟ್ಟು ಸೇರಿದಂತೆ ಬಜೆಟ್ ವಿಚಾರವನ್ನು ಚರ್ಚೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಬಿಜೆಪಿಯವರು ಆಪರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದ್ದರು. ಹಾಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಿ.ಕೆ ಶಿವಕುಮಾರ್ ಶಾಸಕಾಂಗ ಸಭೆ ಕರೆಯುವ ನೆಪದಲ್ಲಿ ರೆಸಾರ್ಟ್ ರಾಜಕಾರಣ ಶುರು ಮಾಡಿದರು. ಅಲ್ಲಿ ಮತ್ತೊಂದು ಯಡವಟ್ಟಾಗಿ ಕಾಂಗ್ರೆಸ್ ಶಾಸಕರು ನಡುವೇ ಮಾರಾಮಾರಿ ನಡೆದೇಹೋಯ್ತು. ನಂತರ ಸಿದ್ದಗಂಗಾ ಶ್ರೀಗಳ ಅಗಲಿಕೆಯಿಂದ ನಿನ್ನೆಯೂ ಮೈತ್ರಿ ಸರ್ಕಾರದ ಕೆಲಸಗಳು ಹಾಗೇ ಉಳಿದಿದ್ದವು. ಆದರಿಂದ ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಈ ಎಲ್ಲಾ ಬೆಳವಣೆಗೆಗಳ ಬಗ್ಗೆ ಚರ್ಚೆಯಾಗಲಿದೆ ಎನ್ನಲಾಗಿದೆ.
ಕಾಂಗ್ರೆಸ್ ಶಾಸಕರ ಬಡಿದಾಟದಿಂದ ಮೈತ್ರಿ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಿದೆ. ಇದರಿಂದ ಜೆಡಿಎಸ್ ಶಾಸಕರು ಅಸಮಾಧಾನಗೊಂಡಿದ್ದಾರೆ. ರೆಸಾರ್ಟ್ ರಾಜಕಾರಣ, ಮೈತ್ರಿ ಸರ್ಕಾರದ ಉಳಿವು, ಜೆಡಿಎಸ್ ಶಾಸಕರಲ್ಲಿನ ಅತೃಪ್ತಿ, ಕಾಂಗ್ರೆಸ್ಸಿನ ಏಕಪಕ್ಷೀಯ ನಿರ್ಧಾರಗಳು, ಲೋಕಸಭೆ ಚುನಾವಣೆಯಲ್ಲಿನ ತಯಾರಿ ಬಗ್ಗೆ ಚರ್ಚೆ ನಡೆಯಲ್ಲಿದೆ. ಇಲ್ಲಿ ಎಲ್ಲಾ ಶಾಸಕರಿಂದ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಯಲಿದೆ.
ವಿಧಾನಮಂಡಲ ಜಂಟಿ ಅಧೀವೇಶನದಲ್ಲಿ ಸಂಕಷ್ಟವನ್ನು ಹೇಗೆ ಎದುರಿಸಬೇಕು. ಹಾಗೆಯೇ ಬಜೆಟ್ ಮಂಡನೆ ತಯಾರಿ ಹೇಗಿರಬೇಕು; ಕಾಂಗ್ರೆಸ್ ಶಾಸಕರ ನಿಗಮ ಮಂಡಳಿ ಅಧ್ಯಕ್ಷಗಾದಿಗೆ ಸಿಎಂ ವಿಳಂಬ; ಜೆಡಿಎಸ್ ಸಚಿವರ ಖಾತೆಗಳಿಗೆ ಕಾಂಗ್ರೆಸ್ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಿಸಿರುವ ಗೊಂದಲ ಸೇರಿದಂತೆ ಹಲವು ಚರ್ಚೆಯಾಗುವ ನಿರೀಕ್ಷೆಯಿದೆ.
–