ನವದೆಹಲಿ: ನಮ್ಮಲ್ಲಿ ಹಣಬಲಕ್ಕಿಂತ ಜನಬಲವೇ ಮುಖ್ಯವಾಗಿದೆ ಎಂಬ ಹೇಳಿಕೆಗಳನ್ನು ನೀಡುತ್ತ ಪ್ರಧಾನಿ ಮೋದಿಯವರ ಮಾತಿಗೆ ವಿರುದ್ಧವಾದ ಸಂಗತಿ ಬೆಳಕಿಗೆ ಬಂದಿದೆ. ವಿಪಕ್ಷ ಕಾಂಗ್ರೆಸ್ ಗಿಂತಲೂ ಬಿಜೆಪಿಯಲ್ಲಿಯೇ ಹೆಚ್ಚಿನ ಹಣಬಲವಿದೆ ಎಂಬ ಅಂಶ ಬಯಲಾಗಿದೆ.
2013ರ ನಂತರದ ಅಂಕಿ-ಅಂಶಗಳನ್ನು ಗಮನಿಸಿದಾಗ ಕಾಂಗ್ರೆಸ್‌ಗಿಂತ ಎರಡು ಪಟ್ಟು ಹೆಚ್ಚು ಆದಾಯವನ್ನು ಬಿಜೆಪಿ ಗಳಿಸಿರುವುದು ಬೆಳಕಿಗೆ ಬಂದಿದೆ. 2013ರಿಂದ 2018ರ ಅವಧಿಯಲ್ಲಿ ಬಿಜೆಪಿಯ ಘೋಷಿತ ಆದಾಯ 4,276 ಕೋಟಿ ಆಗಿದ್ದರೆ, ಕಾಂಗ್ರೆಸ್‌ನ ಘೋಷಿತ ಆದಾಯ 1,877 ಕೋಟಿ ಎಂದು ಪ್ರಜಾಪ್ರಭುತ್ವ ಸುಧಾರಣಾ ಸಂಘಟನೆಯ (ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ಅಂಕಿಅಂಶ ಉಲ್ಲೇಖಿಸಿಸಿ ದಿ ಪ್ರಿಂಟ್ ವರದಿ ನೀಡಿದೆ.
ವಿಪಕ್ಷಗಳ ವಾರ್ಷಿಕ ಆದಾಯಕ್ಕೆ ಹೋಲಿಸಿದರೆ ಬಿಜೆಪಿ ಆದಾಯವೇ ಅಧಿಕವಾಗಿದೆ.
ಪಕ್ಷ – ವಾರ್ಷಿಕ ಆದಾಯ (2017–18)
ಬಿಜೆಪಿ – 1,027 ಕೋಟಿ
ಕಾಂಗ್ರೆಸ್ – 199 ಕೋಟಿ
ಸಿಪಿಐಎಂ – 105 ಕೋಟಿ
ಬಿಎಸ್‌ಪಿ – 52 ಕೋಟಿ
ಎನ್‌ಸಿಪಿ – 8 ಕೋಟಿ
ಟಿಎಂಸಿ – 5 ಕೋಟಿ
ಸಿಪಿಐ – 1.5 ಕೋಟಿ
ನಮೋ ಆ್ಯಪ್ ಮೂಲಕ ಕೆಲವು ಲೋಕಸಭಾ ಕ್ಷೇತ್ರಗಳ ಬೂತ್ ಮಟ್ಟದ ಕಾರ್ಯಕರ್ತರ ಜತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್, ಟಿಎಂಸಿ, ಟಿಡಿಪಿ ಸೇರಿದಂತೆ ಪ್ರತಿಪಕ್ಷಗಳನ್ನು ಅವಕಾಶವಾದಿ ಹಾಗೂ ಭ್ರಷ್ಟ ಪಕ್ಷಗಳು ಎಂದು ದೂರಿದ್ದರು. ಅಲ್ಲದೆ, ‘ಅವರ ಮತ್ತು ನಮ್ಮ ನಡುವಣ ವ್ಯತ್ಯಾಸ ಸ್ಪಷ್ಟವಾಗಿದೆ– ಒಂದು ಕಡೆ ಹಣಬಲವಿದೆ, ಆದರೆ ನಮ್ಮಲ್ಲಿ ಜನಬಲವಿದೆ… ಒಂದು ಕಡೆ ತಮ್ಮ ಕುಟುಂಬಗಳನ್ನು ರಕ್ಷಿಸಿಕೊಳ್ಳಲು ಹಾಗೂ ಅದನ್ನು ಪೋಷಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ನಾವು ದೇಶವನ್ನು ಕಟ್ಟುತ್ತಿದ್ದೇವೆ’ ಎಂದು ಹೇಳಿದ್ದರು.
ಆದರೆ, 2014ರಲ್ಲಿ ಅಧಿಕಾರಕ್ಕೇರಿದ ಬಳಿಕ ಬಿಜೆಪಿಯ ಆದಾಯ ಗಣನೀಯವಾಗಿ ಹೆಚ್ಚಾಗಿರುವುದು ಅಂಕಿಅಂಶಗಳಿಂದ ತಿಳಿದು ಬಂದಿದೆ ಎಂದು ದಿ ಪ್ರಿಂಟ್ ವರದಿ ಹೇಳಿದೆ.
Modi says Opposition has money power, but BJP earned double that of Congress since 2013